*ಕುಂಭಮೇಳದ ರುದ್ರಾಕ್ಷಿ ಸುಂದರಿ ಮೊನಾಲಿಸಾ ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಪ್ರಯಾಗ್ ರಾಜ್ ನಲ್ಲಿ ನಡೆದಿದ್ದ ಕುಂಭಮೇಳದ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದ ರುದ್ರಾಕ್ಷಿ ಸುಂದರಿ ಮೊನಾಲಿಸಾ ಭೋಸ್ಲೆ ವಿವಾಹ ಪ್ರಕರಣ ಸಂಕಷ್ಟಕ್ಕೆ ಸಿಲುಕಿದೆ. ಕುಂಭಮೇಳದ ನೀಲಿ ಕಂಗಳ ಚಲುವೆಯಾಗಿ ಗಮನ ಸೆಳೆದಿದ್ದ ಮೊನಾಲಿಸಾ ಬಳಿಕ ಬಾಲಿವುಡ್, ಮಲಯಾಳಂ ಹೀಗೆ ವಿವಿಧ ಚಿತ್ರರಂಗದಲ್ಲಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜನಪ್ರಿಯತೆ ಮೆಟ್ಟಿಲೇರುತ್ತಿರುವಾಗಲೇ ಉತ್ತರ ಪ್ರದೇಶ ಮೂಲದ ನಟ ಫರ್ಮಾನ್ ಖಾನ್ ನನ್ನು ಪ್ರೀತಿಸುವ ಮೂಲಕ ಆತನೊಂದಿಗೆ ಕೆಲ ದಿನಗಳ ಹಿಂದಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮಾರ್ಚ್ 11ರಂದು ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಕೇರಳದ ತಿರುವನಂತಪುರಂ ನ ಅರುಮನೂರು ನೈನಾರ್ ದೇವಾಲಯದಲ್ಲಿ ವಿವಾಹವಾಗಿದ್ದರು. ಈ ಮದುವೆಯ ನೋಂದಣಿಗಾಗಿ ಸಲ್ಲಿಸಲಾಗಿದ್ದ ಆಧಾರ್ ಕಾರ್ಡ್ನಲ್ಲಿ ಮೊನಾಲಿಸಾಗೆ 18 ವರ್ಷ ಎಂದು ನಮೂದಿಸಲಾಗಿತ್ತು. ಈ ನಡುವೆ ಮೊನಾಲಿಸಾ ತಂದೆ ಕೂಡ ತನ್ನ ಮಗಳು ಇನ್ನೂ ಅಪ್ರಾಪ್ತೆ ಈ ಮದುವೆಯನ್ನು ನಾನು ಒಪ್ಪಲ್ಲ ಇದೊಂದು ಬಲವಂತದ ಮದುವೆ ಎಂದು ದೂರು ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮೊನಾಲಿಸಾ ಹಾಗೂ ಆಕೆಯ ಪತಿ ಫರ್ಮಾನ್ ಖಾನ್ ಕೆಲ ದಾಖಲೆಗಳನ್ನು ತೋರಿಸಿ ಮೊನಾಲಿಸಾಗೆ 18ವರ್ಷವಾಗಿದೆ ಅಪ್ರಾಪ್ತೆಯಲ್ಲ ಎಂದು ಹೇಳಿಕೆ ನೀಡಿದ್ದರು.
ಮದುವೆಯ ನೋಂದಣಿಗಾಗಿ ಸಲ್ಲಿಸಲಾಗಿದ್ದ ಆಧಾರ್ ಕಾರ್ಡ್ನಲ್ಲಿ ಮೊನಾಲಿಸಾಗೆ 18 ವರ್ಷವೆಂದಿದೆ. ಆದರೆ, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಮೊನಾಲಿಸಾ 2009ರ ಡಿಸೆಂಬರ್ 30ರಂದು ಜನಿಸಿರುವುದು ದೃಢಪಟ್ಟಿದೆ. ಇದರರ್ಥ ಮದುವೆಯ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ 2 ತಿಂಗಳು ಮಾತ್ರ. ಇನ್ನೂ ಆಕೆ ಅಪ್ರಾಪ್ತೆ ಎಂಬುದು ದೃಢಪಟ್ಟಿದೆ.
ಮೊನಾಲಿಸಾ ಅಪ್ರಾಪ್ತ ವಯಸ್ಕಳು ಎಂಬುದು ಸಾಬೀತಾದ ಬೆನ್ನಲ್ಲೇ, ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಗಾಗಿ ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಕೇರಳದ ಸ್ಥಳೀಯ ಅಧಿಕಾರಿಗಳಿಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಸಮನ್ಸ್ ಜಾರಿ ಮಡಿದೆ.
ಅಲ್ಲದೇ ಮಧ್ಯಪ್ರದೇಶ ಹಾಗೂ ಕೇರಳ ಪೊಲೀಸ್ ಮಹಾನಿರ್ದೇಶಕರಿಗೂ ವರದಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ.


