*ವಾಯು ವಿಹಾರದೊಂದಿಗೆ ಪ್ರಗತಿ ಪರಿಶೀಲನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿನೂತನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮುಂಜಾನೆ 7 ಗಂಟೆಗೆ ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ವಾಯುವಿಹಾರದ ಜೊತೆಗೆ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕಳೆದವಾರ ಕೂಡ ವಿವಿಧ ಬಡಾವಣೆಗಳಲ್ಲಿ ವಾಯುವಿಹಾರದ ಜೊತೆಗೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದ ಸಚಿವರು ಭಾನುವಾರ ಕುಮಾರಸ್ವಾಮಿ ಬಡಾವಣೆಯಲ್ಲಿ ಪರಿಶೀಲನೆ ನಡೆಸಿದರು.

ಬಡಾವಣೆಯಲ್ಲಿರುವ ಮೂರು ಉದ್ಯಾನವನಗಳ ನಿರ್ವಹಣೆ, ಬಡಾವಣೆಯ ಮುಖ್ಯ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ವ್ಯವಸ್ಥೆ, ನೀರಿನ ಸರಬರಾಜು, ಬೀದಿಗಳ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ಕಾಲ್ನಡಿಗೆಯಲ್ಲಿ ಸಂಚರಿಸಿ ಪರಿಶೀಲಿಸಿದರು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ನಗರ ಸೇವಕರು, ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.
ನಂತರ ಬಡಾವಣೆಯ ಶಿವಾಲಯದಲ್ಲಿ ಬಡಾವಣೆಯ ಎಲ್ಲ ರಹವಾಸಿಗಳ ಸಮ್ಮುಖದಲ್ಲಿ ಸಭೆ ನಡೆಸಿದರು. ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಚಿವರು, ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಬಡಾವಣೆಯಲ್ಲಿ ಮಾಡಿರುವುದಾಗಿ ತಿಳಿಸಿದರು.

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಯ ಸಂಘದ ಅಧ್ಯಕ್ಷರಾದ ವ್ಹಿ.ಜಿ ನೀರಲಗಿಮಠ ಪ್ರಾಸ್ತಾವಿಕ ಮಾತನಾಡಿ, ಬಡಾವಣೆಯ ಅಭಿವೃದ್ಧಿ ಕುರಿತು ಹಾಗೂ ಬಡಾವಣೆಗೆ ಸಚಿವರ ಅಪಾರವಾದ ಕೊಡುಗೆ, ಕಾಳಜಿಯ ಬಗ್ಗೆ ವಿವರಣೆ ನೀಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನಮ್ಮ ಯಾವುದೇ ಬೇಡಿಕೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಅವರಿಂದಾಗಿ ಬಡಾವಣೆಯ ಜನರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಸಿ ಬಿ ಸಂಗೊಳ್ಳಿ ಸ್ವಾಗತಿಸಿದರು. ಎಸ್ ಸಿ ಗಂಗಾಪುರ ವಂದನಾರ್ಪಣೆ ಮಾಡಿದರು. ಮಹಾನಗರ ಪಾಲಿಕೆ ಅಧಿಕಾರಿ ಕಲಾದಗಿ, ನಗರ ಸೇವಕ ಸಂದೀಪ ಜೀರಗಾಳ, ಅರವಿಂದ ಜೋಶಿ, ಯೋಗೇಶ ತಳವಾರ, ಮಲ್ಲಿಕಾರ್ಜುನ ರೊಟ್ಟಿ, ಪಟ್ಟಣಶೆಟ್ಟಿ, ಬಿ ಐ ಪಾಟೀಲ, ರುದ್ರಣ್ಣಾ ಚಂದರಗಿ, ಸುಭಾಷ್ ಹುಲ್ಲಳ್ಳಿ, ರಾಜು ಮಂಜರಿಗಿ, ಬಡಿಗೇರ, ಕೃಷ್ಣ ಹಂದಿಗುಂದ, ಉಮೇಶ ಜೋಶಿ, ಫಟಕಾಳ, ಹೇಮಾ ಶೆಟ್ಟಿ, ಗುಗ್ಗರಿ, ಶಾಂತಾ ಕಬ್ಬಲಿಗೇರ, ಶೋಭಕ್ಕ ಹೊಸಮಠ ಉಪಸ್ಥಿತರಿದ್ದರು.