Politics

*ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಜೀವನಾಧಾರವಾಗಬೇಕೆನ್ನುವುದೇ ನನ್ನ ಉದ್ದೇಶ: ಸಚಿವೆ‌ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ, ಮಹಿಳೆಯರ ಜೀವನಕ್ಕೆ ಆಧಾರ ಆಗಬೇಕು ಎಂಬುದೇ ನನ್ನ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹಿರೇಬಾಗೇವಾಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಮಾನ್ಯ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗೃಹಲಕ್ಷ್ಮೀ ಯೋಜನೆಯಿಂದ ಬರುವ ಹಣವನ್ನು ಸೇರಿಸಿ ಸ್ವಯಂ ಉದ್ಯೋಗ ಶುರುಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂಬುದೇ ನನ್ನ ಬಯಕೆ ಎಂದರು.

ಜೀವನ ಅಭಿವೃದ್ಧಿ ಆಗಬೇಕು, ಮಕ್ಕಳಿಗೆ ಶಿಕ್ಷಣ ಸಿಗಬೇಕು, ಎಲ್ಲರಿಗೂ ಆರೋಗ್ಯ ಸಿಗಬೇಕು ಎಂಬುದೇ ಗೃಹಲಕ್ಷ್ಮೀ ಯೋಜನೆಯ ಮೂಲ ಉದ್ದೇಶ ಎಂದು ತಿಳಿಸಿದರು.

ಮಹಿಳೆಯರು ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಆರ್ಥಿಕ ಸಬಲೀಕರಣದ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.

ಧರ್ಮಸ್ಥಳ ಅಭಿವೃದ್ಧಿ ಸಂಘದ ಜೊತೆಗೆ ನನಗೆ 25 ವರ್ಷಗಳ ಒಡನಾಟವಿದೆ. ಸೇವೆಯಲ್ಲಿ ಭಗವಂತನನ್ನು ಕಾಣುವುದು ನಮ್ಮ ಧೈಯ, ಧರ್ಮದಿಂದ ವಿಚಾರ ಮಾಡಿ ಆರಂಭಿಸಿದ ಧರ್ಮಸ್ಥಳ ಸಂಘ ಇಂದು ರಾಜ್ಯದ ಮನೆ ಮಾತಾಗಿದೆ. ಪ್ರತಿ ಮನೆಯಲ್ಲೂ ದೀಪ ಬೆಳಗಿಸುವ ಕೆಲಸ ಮಾಡುತ್ತಿದೆ ಎಂದು ಧರ್ಮಸ್ಥಳ ಅಭಿವೃದ್ಧಿ ಸಂಘಗಳ ಕಾರ್ಯವನ್ನು ಶ್ಲಾಘಿಸಿದರು.

ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾಳೆ, ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, 25 ವರ್ಷದ ಹಿಂದೆ ಮಹಿಳೆಯನ್ನು ನೋಡುವ ದೃಷ್ಟಿ ಬೇರೆ ಇತ್ತು, ಇಂದು ಅದು ಬದಲಾಗಿದೆ. ಜಗತ್ತನ್ನೇ ಗೆಲ್ಲುವ ಛಲ ಮಹಿಳೆಗಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ಪಾಟೀಲ್, ಸುರೇಶ್ ಇಟಗಿ, ಸತೀಶ್ ನಾಯ್ಕ್, ಲಕ್ಷ್ಮೀ ಅರಿಬೆಂಚಿ, ಪರ್ವತಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button