Politics

*ಸಿ.ಟಿ.ರವಿ ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಸಿ.ಟಿ.ರವಿ ವಿರುದ್ಧ ಕಾನೂನು ಸಮರ


ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ. ಸಿ.ಟಿ.ರವಿ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. ಕಳೆದ 26 ವರ್ಷಗಳಿಂದ ಸಂಘರ್ಷದಿಂದ ಮೇಲೆ ಬಂದಿದ್ದೇನೆ. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ ಎಂದರು. ‌

ಘಟನೆ ಬಳಿಕ ಸಿ.ಟಿ.ರವಿ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ.‌ ಸಿ.ಟಿ. ರವಿ ವಿರುದ್ಧ ಹೋರಾಟ ಮುಂದುವರಿಸುವೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು. ಇಂಥ ಸಂದರ್ಭದಲ್ಲೂ ಬಿಜೆಪಿಯವರು ಸಿ.ಟಿ ರವಿ ಬೆನ್ನಿಗೆ ನಿಂತಿದ್ದಾರೆ ಎಂದು ಸಚಿವರು ಕಿಡಿ ಕಾರಿದರು.

ಸಿ.ಟಿ.ರವಿ ಅವರಿಗೆ ಏನಾಗಿದೆ ಗಾಯ, ಎಷ್ಟಾಗಿದೆ ಗಾಯ. ಪೊಲೀಸರು ಎನ್ ಕೌಂಟರ್ ಮಾಡುತ್ತಿದ್ದರು, ಅಂತಾರಲ್ಲಾ, ನಾಚಿಕೆ ಆಗಲ್ವ ನಿಮಗೆ. ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕು ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿ.ಟಿ.ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ, ಸಾಧ್ಯವಾದರೆ ಭೇಟಿ ಯಾಗುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಿ.ಟಿ ರವಿ ಆಡಿದ ಮಾತಿರುವ ವಿಡಿಯೋ ರಿಲೀಸ್ ಮಾಡಿದ ಸಚಿವರು
ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಬಳಸಿದ ಅಶ್ಲೀಲ ಪದ ಬಳಕೆಯ ವಿಡಿಯೋವನ್ನು ಸಚಿವರು ಮಾಧ್ಯಮಗಳ ಎದುರು ಬಿಡುಗಡೆ ಮಾಡಿದರು. ಎರಡು ಪ್ರತ್ಯೇಕ ‌ವಿಡಿಯೋಗಳನ್ನು ಸಚಿವರು ರಿಲೀಸ್ ಮಾಡಿದರು. ಒಂದು ವಿಡಿಯೋದಲ್ಲಿ ಸಿ.ಟಿ. ರವಿ ಸಚಿವರಿಗೆ ಆಕ್ಷೇಪಾರ್ಹ ಪದ ಬಳಸಿದ್ದರೆ, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಅಂದಿದ್ದ ವಿಡಿಯೋವನ್ನು ಸಚಿವರು ಬಿಡುಗಡೆ ಮಾಡಿದರು. ‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button