*ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿಯೇ ಅಕ್ಕಪಡೆ ರಚನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದೇ ನಮ್ಮ ಗುರಿ
ಪ್ರಗತಿವಾಹಿನಿ ಸುದ್ದಿ: ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿಯೇ ಅಕ್ಕಪಡೆ ರಚಿಸಲಾಗಿದ್ದು, ದಿನದಲ್ಲಿ 12 ಗಂಟೆ ಗಸ್ತು ತಿರುಗಲಿದೆ. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಶೇಷ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.
ಕಳೆದ ವರ್ಷ ನವೆಂಬರ್ 28 ರಂದು ಅಕ್ಕ ಪಡೆಗೆ ಚಾಲನೆ ನೀಡಲಾಗಿದ್ದು, ಈ ಅಕ್ಕಪಡೆ ಎಲ್ಲೆಡೆ ಗಸ್ತು ತಿರುಗುತ್ತದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕ ಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ದೌರ್ಜನ್ಯ ತಡೆಗಟ್ಟಲು ಗ್ರಾಮ ಪಂಚಾಯಿತಿಯಿಂದ ಹಿಡಿದು ಮೇಲ್ಮಟ್ಟದವರೆಗೂ ಸಮಿತಿ ರಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉತ್ತರಿಸಿದರು.
ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರುತ್ತದೆ. ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ, ಆಕಾಶವಾಣಿಯಲ್ಲಿ ಒಂದೂವರೆ ತಿಂಗಳ ಪ್ರಚಾರ ನೀಡಲಾಗಿದೆ ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ 440 ಕೃತಕ ಕಾಲುಗಳ ವಿತರಣೆ
ಮೈಸೂರು ಜಿಲ್ಲೆಯಲ್ಲಿ 2023-24, 2024-25ನೇ ಸಾಲಿನಲ್ಲಿ ಎನ್‌ಜಿಒಗಳ ಸಹಾಯದಿಂದ 440 ಕೃತಕಕಾಲು ಗಳನ್ನು ವಿತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಉತ್ತರಿಸಿದರು.
2023-24ರಲ್ಲಿ 10 ಅರ್ಜಿಗಳು, 2024-25ರಲ್ಲಿ 31 ಅರ್ಜಿಗಳು ಇಲಾಖೆಯಲ್ಲಿ ಸ್ವೀಕೃತವಾಗಿವೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೃತಕ ಕಾಲುಗಳನ್ನು ವಿತರಣೆ ಮಾಡಿದ್ದೇವೆ ಎಂದರು.
2025-26ರಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ 20 ಅರ್ಜಿಗಳನ್ನು ಸ್ವೀಕರಿಸಿದ್ದು, ಇವರಿಗೆ ಕೃತಕ ಕಾಲು ನೀಡಲು ಕ್ರಮವಹಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಪಡೆಯಬೇಕೆಂದರೆ, 10 ವರ್ಷ ಒಂದೇ ಸ್ಥಳದಲ್ಲಿ ವಾಸವಿರಬೇಕು, ಆದಾಯ ಮಿತಿ ಕೇವಲ 20 ಸಾವಿರ ರೂಪಾಯಿಗಳಿಗೆ ಸೀಮಿತಗೊಳಿಸಿ 1992ರಲ್ಲಿ ಒಂದು ನಿಯಮ ರೂಪಿಸಲಾಗಿತ್ತು. ನಾವೀಗ ಈ ನಿಯಮವನ್ನು ಪರಿಷ್ಕರಣೆ ಮಾಡಿದ್ದು, ನಗರದ ಪ್ರದೇಶದವರಿಗೆ ಆದಾಯವನನ್ನು 2.25 ಲಕ್ಷ, ಗ್ರಾಮೀಣ ಪ್ರದೇಶದವರಿಗೆ 2 ಲಕ್ಷ, ಒಂದೇ ಸ್ಥಳದಲ್ಲೇ 7 ವರ್ಷ ವಾಸ ಇರುವವರೂ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಹೆಚ್ಚು ಪ್ರಚಾರ ಸಿಗುವ ದೃಷ್ಟಿಯಿಂದ ಮೈಸೂರಿನಲ್ಲಿ ಹೆಚ್ಚು ಕ್ಯಾಂಪ್‌ಗಳನ್ನು ಮಾಡಲು ಸೂಚಿಸಲಾಗಿದೆ ಎಂದರು.


