*ಸ್ಪಷ್ಟತೆ ಹಾಗೂ ಬದ್ಧತೆಯಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ವಿಧಾನ ಸಭೆಯಲ್ಲಿ ಸಚಿವರ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಮಾದರಿಯಾದ, ಮಹಿಳೆಯರ ಸಬಲೀಕರಣ ಉದ್ದೇಶ ಹೊಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿಗಳ ಪಾಲಾಗದಂತೆ ಜಾರಿಗೊಳಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಗಸ್ಟ್ ತಿಂಗಳವರೆಗೆ 1.24 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಲಾಗಿದೆ. ಮೊದಲು ಇಲಾಖೆಯಿಂದ ನೇರವಾಗಿ ಹಣ ಹಾಕಲಾಗುತ್ತಿತ್ತು. ನಂತರದಲ್ಲಿ ತಾಲೂಕು ಪಂಚಾಯತ್ ಮೂಲಕ ಹಣ ಹಾಕಲಾಗುತ್ತಿದೆ. ಹಾಗಾಗಿ ಮಧ್ಯದಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದ್ದು ನಿಜ, ಆದರೆ ಒಂದೇ ಒಂದು ರೂಪಾಯಿ ಆಚೆ ಈಚೆ ಆಗದಂತೆ ಮಹಿಳೆಯರಿಗೆ ತಲುಪಿಸಲಾಗುತ್ತಿದೆ. ಸ್ಪಷ್ಟತೆ ಮತ್ತು ಬದ್ಧತೆಯಿಂದ ಯೋಜನೆ ಮುಂದುವರಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.
ಆರಂಭದಲ್ಲಿ ಯೋಜನೆಯನ್ನು ನಿಲ್ಲಿಸಲು ಹೇಳಿದವರು ನೀವು, ಯೋಜನೆ ಕುರಿತು ಹಾದಿ ಬೀದಿಯಲ್ಲಿ ಟೀಕೆ ಮಾಡುತ್ತಿದ್ದ ಬಿಜೆಪಿಯವರಿಗೆ ಈಗ ಏಕಾಏಕಿ ಕಾಳಜಿ, ಪ್ರೀತಿ ಬಂತಾ ಎಂದು ಪ್ರಶ್ನಿಸಿದ ಸಚಿವರು, ನಮ್ಮದೇ ಯೋಜನೆ ಕಾಪಿ ಮಾಡಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಲಾಡ್ಲಿ ಬೆಹೆನ್ ಯೋಜನೆ ಕಥೆ ಏನಾಗಿದೆ ಎಂದು ಎಲ್ಲರಿಗೂ ಗೊತ್ತು. ಬೇರೆ ರಾಜ್ಯದ ಬಗ್ಗೆ ಮಾತಾನಾಡಬಾರದು ಎಂದು ಸುಮ್ಮನಿದ್ದೆ. ನಾವು ಒಂದೇ ಒಂದು ಅಪಾದನೆ ಬರದಂತೆ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.



