GIT add 2024-1
Laxmi Tai add
Beereshwara 33

ನನ್ನ ರಾಜಕೀಯ ಅನುಭವದಲ್ಲಿ ಸಿದ್ದರಾಮಯ್ಯನವರು ಮಠದ ಸ್ವಾಮೀಜಿಗಳಂತೆ ಮಾತನಾಡಿದ್ದು ಇದೇ ಮೊದಲು ಎಂದ ಡಿ.ಕೆ.ಶಿವಕುಮಾರ್

ನಾನು ಶ್ರೀ ಗಂಗಾಧರಜ್ಜನ ಶಿಷ್ಯ: ಕೆಪಿಸಿಸಿ ಅಧ್ಯಕ್ಷ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಅರಳಿಕಟ್ಟೆ ಮಠದ ಶಿವಮೂರ್ತಿ ದೇವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಇಂದು ನಾವೆಲ್ಲ ಸೇರಿದ್ದೇವೆ. ನನ್ನ ರಾಜಕೀಯ ಅನುಭವದಲ್ಲಿ ಸಿದ್ದರಾಮಯ್ಯನವರು ರಾಜಕೀಯ ಹೊರತಾಗಿ ಒಂದು ಮಠದ ಸ್ವಾಮೀಜಿಗಳಂತೆ ಮಾತನಾಡಿದ್ದು ಇದೇ ಮೊದಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯ ಅರಳಿಕಟ್ಟೆ ಮಠದ ಶಿವಮೂರ್ತಿ ದೇವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಪವಿತ್ರ ಸಂದರ್ಭದಲ್ಲಿ ಪುರಂದರದಾಸರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ ಪದುಮನಾಭನ ಪಾದಭಜನೆ ಪರಮ ಸುಖವಯ್ಯ.ಅದೇ ರೀತಿ ಸ್ವಾಮೀಜಿಗಳ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಬಂದು ಇಷ್ಟೊಂದು ತಾಯಂದಿರ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ ಎಂದರು.

ನಾನು ಶ್ರೀ ಗಂಗಾಧರಜ್ಜನ ಶಿಷ್ಯ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ನಾಡು ಧರ್ಮದ ಸಾಮ್ರಾಜ್ಯವಾಗಲಿ, ಭಕ್ತಿಯ ನೆಲೆ ಬೀಡಾಗಲಿ, ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ಆಳಿರಿ ಎಂಬ ಅವರ ತತ್ವವನ್ನು ಅನುಸರಿಸಿಕೊಂಡು ಬಂದಿದ್ದೇನೆ.

ಇಂದು ನಾವೆಲ್ಲ ಬಸವಣ್ಣನವರ ಆಚಾರ, ವಿಚಾರ ನೆನೆಸಿಕೊಳ್ಳುತ್ತೇವೆ. ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಬದುಕುತ್ತಿದೆ. ನಮ್ಮ ಆಸೆಯೆಂದರೆ ಬಸವಣ್ಣನವರ ಕರ್ನಾಟಕ, ಕಿತ್ತೂರು ರಾಣಿ ಕರ್ನಾಟಕ, ಕುವೆಂಪು ಕರ್ನಾಟಕ, ಶಿಶುನಾಳ ಶರೀಫರ ಕರ್ನಾಟಕವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು. ಅದೇ ನಮ್ಮ ಪಕ್ಷದ ಸಿದ್ಧಾಂತ.

ಸಿದ್ದರಾಮಯ್ಯನವರ ಭಾಷಣದ ಸಾರಾಂಶ ಏನೆಂದರೆ ನಮ್ಮ ರಕ್ತದ ಬಣ್ಣ ಕೆಂಪಗಿದೆ, ಅಮೆರಿಕದವರ ರಕ್ತವೂ ಕೆಂಪು ಇರುತ್ತದೆ. ಆಫ್ರಿಕಾದವರದೂ ಕೆಂಪಾಗಿರುತ್ತದೆ. ಈ ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯ ರಕ್ತ ಕೆಂಪಗಿರುತ್ತದೆ. ಪ್ರಪಂಚದ ಯಾವುದೇ ವ್ಯಕ್ತಿಯ ಬೆವರು ಕೂಡ ಉಪ್ಪಾಗಿರುತ್ತದೆಯೇ ಹೊರತು ಸಿಹಿಯಾಗಿರುವುದಿಲ್ಲ ಎಂಬುದು.

ಹೀಗೆ ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರು ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ದೇವನೊಬ್ಬ ನಾಮ ಹಲವು.

ಇಂದು ನಮ್ಮ ಸಮಾಜಕ್ಕೆ ಮಠಗಳ ಅಗತ್ಯವಿದೆ. ನೀರಿನ ಮಟ್ಟ ಬೆಳೆಯುತ್ತಿದೆ. ಸ್ವಾಮೀಜಿಗಳು ಅದನ್ನು ಬೆಳೆಸುತ್ತಿದ್ದಾರೆ. ಹಿಂದೆ ಹಿರಿಯರು ಮನೆಯ ಕಡೆ ಹುಷಾರು ಎಂದು ಹೇಳಿದರು ಅಂದರೆ ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದಾಗಿತ್ತು. ಅದೇ ರೀತಿ ನಮ್ಮ ಮಠಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ.

ಅದೇ ರೀತಿ ಇಂದು ಮಠಕ್ಕೆ 20 ಲಕ್ಷ ರೂ. ದೇಣಿಗೆ ನೀಡಿದ ಕುಟುಂಬ ಇರುವವರೆಗೂ ಇದು ಸದಾ ನೆನಪಿನಲ್ಲಿ ಇರುತ್ತದೆ.

ನೀವು ಕೂಡ ನಿಮ್ಮ ಕೈಯಲ್ಲಿ ಎಷ್ಟು ಶಕ್ತಿ ಇದೆಯೋ ಅಷ್ಟು ದಾನ-ಧರ್ಮ ಮಾಡಿ. ನಾವು ರಾಜಕಾರಣಿಗಳು ಸಾಧ್ಯವಾದಷ್ಟು ಮಾಡುತ್ತೇವೆ.

ಸ್ವಾಮೀಜಿಗಳು ಹೇಳುತ್ತಿದ್ದರು, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಠಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು. ಕೇವಲ ಈ ಮಠ ಮಾತ್ರವಲ್ಲ ಸಾಕಷ್ಟು ಮಠ ಗಳಿಗೆ ನೆರವು ನೀಡಿದ್ದಾರೆ. ಕಿತ್ತೂರಾಣಿ ಚೆನ್ನಮ್ಮ ವಿಗ್ರಹಗಳು, ಶಿವಾಜಿ ಮಹಾರಾಜರ ವಿಗ್ರಹಗಳು ಸೇರಿದಂತೆ ಅವರ ಧರ್ಮ, ನಂಬಿಕೆಗೆ ಅನುಗುಣವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಕನಸು ಜೀವನಕ್ಕೆ ಸ್ಫೂರ್ತಿ, ನಮ್ಮ ನಮ್ಮ ನಂಬಿಕೆ ನಮ್ಮ ಕೆಲಸಕ್ಕೆ ಸ್ಫೂರ್ತಿ, ಪ್ರೀತಿ ಹೃದಯಕ್ಕೆ ಸ್ಫೂರ್ತಿ, ಆದರೆ ನಗು ನಮ್ಮೆಲ್ಲರಿಗೂ ಸ್ಪೂರ್ತಿ.

Emergency Service

ನಾವು ಹುಟ್ಟುವಾಗ ಇಂತಹದೇ ಜಾತಿ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಾವು ಜಾತಿ ಧರ್ಮ ಬೇಡ ಎಂದು ಎಷ್ಟೇ ದೂರ ಹೋದರೂ ಅದು ನಮ್ಮನ್ನು ಬಿಡುವುದಿಲ್ಲ. ನಾಮಕರಣ ಮಾಡುವಾಗ, ಕಿವಿ ಚುಚ್ಚುವುದು ಧರ್ಮದ ಭಾಗವೇ. ಯುವಕ-ಯುವತಿಯರು ಪ್ರೀತಿಸಿ ಮದುವೆಯಾಗುತ್ತಾರೆ. ಅಕ್ಕಿ ಒಂದು ಕಡೆ ಇರುತ್ತದೆ, ಅರಿಶಿನ ಒಂದು ಕಡೆ ಇರುತ್ತದೆ. ಎರಡು ಸೇರಿದರೆ ಮಂತ್ರಾಕ್ಷತೆ ಆಗುತ್ತದೆ. ಸತ್ತ ನಂತರ ನಮ್ಮ ದೇಹವನ್ನು ಮಣ್ಣಿನಲ್ಲಿ ಹೂಳಬೇಕು, ಸುಡಬೇಕೋ ಎಂಬುದನ್ನು ನಮ್ಮ ಧರ್ಮವೇ ನಿರ್ಧರಿಸುತ್ತದೆ. ನೀವು ಧರ್ಮವನ್ನು ಬಿಟ್ಟರೂ ಧರ್ಮ ನಿಮ್ಮನ್ನು ಬಿಡುವುದಿಲ್ಲ. ಹೀಗಾಗಿ ನಿಮ್ಮತನವನ್ನು ನೀವು ಉಳಿಸಿ, ಬೆಳೆಸಿಕೊಂಡು ಹೋಗಬೇಕು.

ಇಂದು ದೇಶ ಹಾಗೂ ಸಮಾಜ ಬಹಳ ಸಂಕಷ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ.ಅದಕ್ಕೀಗ ಕೆಲವರು ಸಂಚಾಕಾರ ತರುತ್ತಿದ್ದಾರೆ.

ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹೆಣ್ಣು ಕುಟುಂಬದ ಕಣ್ಣು. ಅದೇ ಕಾರಣಕ್ಕೆ ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸಲಾಗುತ್ತದೆ. ಹೆಣ್ಣನ್ನು ನಾವು ಪ್ರತಿ ಹಂತದಲ್ಲಿ ಪೂಜಿಸುತ್ತೇವೆ. ಯಾವುದೇ ಗ್ರಾಮಕ್ಕೆ ಹೋದರು ಅಲ್ಲಿ ಗ್ರಾಮದೇವತೆಯನ್ನು ಪೂಜಿಸುತ್ತೇವೆ. ನಮ್ಮ ಹಿಂದೂ ಧರ್ಮದಲ್ಲಿ ಶಿವನನ್ನು ಪಾರ್ವತಿ ಪರಮೇಶ್ವರ ಎಂದು ವಿಷ್ಣುವನ್ನು ಲಕ್ಷ್ಮಿ ವೆಂಕಟೇಶ್ವರ ಎಂದು ಗಣೇಶನನ್ನು ಗೌರಿ-ಗಣೇಶ ಎಂದು ಕರೆಯುತ್ತೇವೆ. ಹೀಗೆ ನಾವು ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ.

ಮಹಿಳೆಯರೇ ಸಮಾಜಕ್ಕೆ ಗುರುಗಳು ಹಾಗೂ ಆಸ್ತಿಯಾಗಿದ್ದಾರೆ. ಒಂದು ಕುಟುಂಬ ಬದುಕಬೇಕಾದರೆ ನೀವು ಮಾಡುವ ತ್ಯಾಗ ಮಾರ್ಗದರ್ಶನ ಬಹಳ ಮುಖ್ಯ. ಪ್ರತಿ ಗಂಡಸಿನ ಯಶಸ್ಸಿನ ಹಿಂದೆ ತಾಯಿ ಅಥವಾ ಹೆಂಡತಿ ನಿಂತಿರುತ್ತಾಳೆ. ಈ ಸಮಾಜ ಹೋರಾಟ ಮಾಡಿಕೊಂಡು ಬಂದಿದೆ ಎಂದರೆ ಅದಕ್ಕೆ ಮಹಿಳೆಯರ ಶ್ರಮ ಹಾಗೂ ಅವರ ತ್ಯಾಗ ಪ್ರಮುಖ ಕಾರಣ.

ಮಹಾಭಾರತದಲ್ಲಿ ಭೀಷ್ಮರನ್ನು ಗಂಗಾಪುತ್ರ ಎಂದು ಕರೆಯುತ್ತೇವೆ. ಕರ್ಣನನ್ನು ಕುಂತಿ ಪುತ್ರ ಎಂದು ಕರೆಯುತ್ತೇವೆ. ಆ ಕಾಲದಿಂದಲೂ ನಾವು ಮಹಿಳೆಯರನ್ನು ಗೌರವಿಸಿ ಕೊಂಡು ಬಂದಿದ್ದೇವೆ. ಇದು ನಮ್ಮ ದೇಶದ ಶಕ್ತಿ.

ಮಠಾಧೀಶರೂ, ಸ್ವಾಮೀಜಿಗಳ ಧ್ವನಿ ಯಾವಾಗಲೂ ಸಮಾಜದ ಧ್ವನಿಯಾಗಿರಬೇಕು. ಸಮಾಜಕ್ಕೆ ಸಂಕಷ್ಟ ಎದುರಾದಾಗ ನೀವು ಧ್ವನಿಯೆತ್ತಬೇಕು. ನೀವು ರಾಜಕೀಯವಾಗಿ ಧ್ವನಿಯೆತ್ತಿದ್ದರೂ ಅದು ಸಮಾಜಕ್ಕೆ ನೋವುಂಟಾದಾಗ ಬೇಕಾಗುತ್ತದೆ.

ಯಾವುದೇ ಧರ್ಮವು ಬೇರೆಯವರನ್ನು ಅಸೂಯೆ ಮಾಡು, ದ್ವೇಷ ಮಾಡು, ಹಿಂಸೆ ಮಾಡು ಎಂದು ಹೇಳಿಲ್ಲ. ಎಲ್ಲಾ ಧರ್ಮಗಳು ಉಳಿಯಬೇಕಾದರೆ ಬಸವಣ್ಣನವರ ಆಚಾರ ವಿಚಾರ ಪ್ರಚಾರವಾಗಬೇಕಾದರೆ, ಅವರು ಯಾವ ಹಾದಿಯಲ್ಲಿ ನಡೆದರೋ ನಾವು ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡಬೇಕಾಗಿದೆ.

ಮಹಾಭಾರತದಲ್ಲಿ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪತಿಯ ವಸ್ತ್ರಪಹರಣ ಮಾಡುವಾಗ ಅತಿರಥ-ಮಹಾರಥರಾದ ಭೀಷ್ಮರು, ದ್ರೋಣಾಚಾರ್ಯರು ಸೇರಿ ಎಲ್ಲರೂ ಧ್ವನಿ ಎತ್ತದೆ ಮೌನವಾಗಿದ್ದರು. ಅಧರ್ಮ ನಡೆಯುವಾಗ ಅವರು ಕೈಕಟ್ಟಿ ಕೂತಿದ್ದರು. ಈಗ ನಮ್ಮ ಸಮಾಜದಲ್ಲಿ ಅಧರ್ಮ ನಡೆಯುತ್ತಿರುವಾಗ ಮಠಾಧಿಪತಿಗಳು ಅದೇ ರೀತಿ ಕೈಕಟ್ಟಿ ಕೂರಬಾರದು ಎಂದು ಹೇಳಿದರು.

ಭಕ್ತನಿಗೂ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯಗಳು ಹಾಗೂ ಮಠಗಳು. ಮನಸ್ಸಿಗೆ ನೆಮ್ಮದಿ, ಶಾಂತಿ ಪಡೆದು ತಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಳ್ಳಲು ನಾವೆಲ್ಲರೂ ದೇವರ ಮುಂದೆ ಹೋಗುತ್ತೇವೆ. ಆಗ ಅರ್ಚಕರು ನಮ್ಮ ಪರವಾಗಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಶಾಲೆಯಲ್ಲಿ ಆಚಾರ್ಯರಿಂದ ನಾವು ದೇವರನ್ನು ಕಾಣಬಹುದು ಎಂಬ ಮಾತಿದೆ. ಅದೇ ರೀತಿ ದೇವರಿಗೆ ಹಾಗೂ ಇಲ್ಲಿರುವ ಜನರಿಗೂ ಮಠಾಧೀಶರು ಸಂಪರ್ಕ ಸೇತುವೆಯಾಗಿ ಇರಬೇಕು.

ನಾವೆಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಲು ನೀವೆಲ್ಲರೂ ಸಹಕಾರ ನೀಡಬೇಕು. ಜನರು ದಾನ-ಧರ್ಮಕ್ಕೆ ಮುಂದಾಗಬೇಕು. ದಾನಧರ್ಮಕ್ಕೆ ಕಣ್ಣಿಲ್ಲ, ನ್ಯಾಯನೀತಿಗೆ ಸಾವಿಲ್ಲ, ಜೀವ ಚಿಕ್ಕದು, ಜೀವನ ದೊಡ್ಡದು. ಸಾಯುವವನಿಗೆ ಒಂದು ದಾರಿ, ಆದರೆ ಸಾಧಿಸುವವನಿಗೆ ನೂರಾರು ದಾರಿ. ಅದೇ ರೀತಿ ನೀವು ನಿಮ್ಮ ಜೀವನದಲ್ಲಿ ನೂರಾರು ಸಾಧನೆ ಮಾಡಲು ಪ್ರಯತ್ನ ಮಾಡಬೇಕು ಎಂದರು.

ನಾವು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು, ಚಪ್ಪಾಳೆ ಉಳಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನಿಮ್ಮ ಕಷ್ಟಸುಖಗಳಲ್ಲಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ. ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ ರಾಜಕಾರಣದಲ್ಲಿ ಧರ್ಮ ಇರಬೇಕು.

ದೇವರು ನಿಮಗೆ ವರ ಹಾಗೂ ಶಾಪಗಳನ್ನು ನೀಡುವುದಿಲ್ಲ. ಆದರೆ ಅವಕಾಶಗಳನ್ನು ನೀಡುತ್ತಾನೆ. ಆ ಅವಕಾಶಗಳನ್ನು ನೀವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನಿಮ್ಮ ಆಶೀರ್ವಾದ, ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

 

Bottom Add3
Bottom Ad 2