
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬುಧವಾರ ಬಂದ್ – ಮುಷ್ಕರ ನಡೆಸುವುದಾಗಿ ತಿಳಿಸಿರುವುದು ನೋವಿನ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ವ್ಯವಸ್ಥೆಯ ಬಹುಮುಖ್ಯ ಅಂಗವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳ ಬಸ್ಸುಗಳು ಎಂದಿನಂತೆ ಕಾರ್ಯ ನಿರ್ವಹಿಸಬೇಕೆಂದು ಈಗಾಗಲೇ ಸೂಚಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಆದ್ದರಿಂದ ಬಂದ್ -ಮುಷ್ಕರದಲ್ಲಿ ಭಾಗವಹಿಸುವ ಯಾರೊಬ್ಬರೂ ಸರ್ಕಾರಿ ಆಸ್ತಿ- ಪಾಸ್ತಿಗಳಿಗೆ ಅದರಲ್ಲೂ ವಿಶೇಷವಾಗಿ ಸಾರಿಗೆ ಬಸ್ಸುಗಳಿಗೆ ಹಾನಿ ಉಂಟುಮಾಡುವ ದುಷ್ಕೃತ್ಯಕ್ಕೆ ಮುಂದಾಗಬಾರದು. ಒಂದು ವೇಳೆ ಕಾನೂನು ಉಲ್ಲಂಘಿಸಿ ಅಹಿತಕರ ಘಟನೆಗಳಿಗೆ ಯತ್ನಿಸಿದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಬಯಸುತ್ತೇನೆ.
ಈ ರೀತಿಯ ಬಂದ್ ಗಳಿಂದಾಗಿ ನಮ್ಮ ಸರ್ಕಾರಿ ಸಂಸ್ಥೆಗಳಿಗೆ ನಷ್ಟವಾಗುವುದಲ್ಲದೇ ರಾಷ್ಟ್ರದ ಆರ್ಥಿಕ ಚಟುವಟಿಕೆಗಳು ಅಧೋಗತಿಗೆ ತಲುಪುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಎಸ್ಸಾರ್ಟಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಈ ಬಂದ್ ನಲ್ಲಿ ಭಾಗವಹಿಸಬಾರದು ಮತ್ತು ಈ ಸಂಸ್ಥೆಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಬಾರದು
ಎಂದು ನಾನು ಅತ್ಯಂತ ಕಳಕಳಿಯಿಂದ ವಿನಂತಿಸುತ್ತೇನೆ.
ನಮ್ಮ ಸಾರಿಗೆ ನಿಗಮಗಳನ್ನು ಸರ್ಕಾರವು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆ ಎಂದು ಘೋಷಿಸಿದ್ದು, ಆ ಪ್ರಕಾರ ಸಮರ್ಪಕವಾದ ಸಾರಿಗೆ ಸೌಲಭ್ಯವನ್ನು ಒದಗಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಆದ್ಯ ಕರ್ತವ್ಯವಾಗಿದೆ. ಇದನ್ನು ಉಲ್ಲಂಘಿಸಿ ಕೆಲಸಕ್ಕೆ ಗೈರುಹಾಜರಾದರೆ ಅಂತಹವರ ವೇತನವನ್ನು ಕಡಿತಗೊಳಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ