ಗೋವಿಂದ್ ಕಾರಜೋಳ ಏನು ಎಳೆ ಎತ್ತಾ? – ಪ್ರಕಾಶ ಹುಕ್ಕೇರಿಗೆ ಮುದಿ ಎತ್ತು ಎಂದವರಿಗೆ ಲಕ್ಷ್ಮೀ ಹೆಬ್ಬಾಳಕರ್ ಬರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿಯನ್ನು ಮುದಿ ಎತ್ತು ಎಂದು ಲೇವಡಿ ಮಾಡಿರುವ ಸಚಿವ ಗೋವಿಂದ ಕಾರಜೋಳ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
70 ವರ್ಷ ದಾಟಿರುವ ಗೋವಿಂದ ಕಾರಜೋಳ ಪ್ರಕಾಶ ಹುಕ್ಕೇರಿಯನ್ನು ಮುದಿ ಎತ್ತು ಎಂದು ಹೀಯಾಳಿಸುವುದು ಎಷ್ಟು ಸರಿ ಎಂದು ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಅವರ ಪಕ್ಷದಲ್ಲೇ 82 ವರ್ಷ ದಾಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಲ್ಲವೇ? ವೃದ್ಧ ತಂದೆ- ತಾಯಿಯನ್ನು ಹೊತ್ತು ಸಾಗಿದ ಶ್ರವಣಕುಮಾರನ ಕಥೆ ಕೇಳುತ್ತ ಬೆಳೆದವರು ನಾವು. ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಇಂತದ್ದರಲ್ಲಿ 70 ವರ್ಷ ದಾಟಿದ ಗೋವಿಂದ ಕಾರಜೋಳ ಹೀಗಾ ಮಾತನಾಡುವುದು? ಎಂದು ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕಾಶ ಹುಕ್ಕೇರಿ SSLC ಫೇಲ್ ಎಂದಿರುವ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಹೇಳಿಕೆಗೂ ಹೆಬ್ಬಾಳಕರ್ ಸಿಡಿಮಿಡಿಗೊಂಡಿದ್ದಾರೆ. ಪ್ರಭಾಕರ ಕೋರೆ ನಮ್ಮ ಸಮಾಜದ ಹಿರಿಯ ನಾಯಕರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅವರು ಎಷ್ಟು ಬಾರಿ ಪಾಸ್ ಆಗಿದ್ದಾರೋ ಫೇಲ್ ಆಗಿದ್ದಾರೋ ಗೊತ್ತಿಲ್ಲ, ಆದರೆ ಜನರಿಂದ 8 ಬಾರಿ ಪಾಸ್ ಆಗಿರುವ ಪ್ರಕಾಶ ಹುಕ್ಕೇರಿಯವರ ಬಗೆಗೆ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರಿಂದ ಕಿರುಕುಳ, ದಬ್ಬಾಳಿಕೆ; ನಾಲ್ವರಿಂದ ಆತ್ಮಹತ್ಯೆಗೆ ಯತ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ