*ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಹೇಳಿ ಸಿದ್ದರಾಮಯ್ಯ ನವರೇ: ಮಾಜಿ ಸಿಎಂ ಬೊಮ್ಮಾಯಿ ಆಗ್ರಹ*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸೀಟು ಗೆಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದವಾಗಿದ್ದು, ಕಾಂಗ್ರೆಸ್ ಸ್ಪರ್ಧೆ ಮಾಡಿದ್ದೇ 200 ಸ್ಥಾನಗಳಲ್ಲಿ, ಅದರಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಅನ್ನುವುದನ್ನು ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಅವರು ಇಂದು ಹಾವೇರಿ ಜಿಲ್ಲೆಯ ಹಿರೆಕೆರೂರು ವಿಧಾನಸಭಾ ಕ್ಷೇತ್ರದ ಮಡ್ಲೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ 543 ಲೋಕಸಭಾ ಕ್ಷೇತ್ರದಲ್ಲಿ ಕೇವಲ 200 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ನವರು ದೇಶ ಆಳುತ್ತೇವೆ ಅಂತ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ನಮ್ಮ ನಾಯಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮೆಚ್ಚಿ ದೇಶದಲ್ಲಿ ಬಿಜೆಪಿ 400 ಸೀಟು ಬರುತ್ತವೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಅದರಿಂದ ಭಯಗೊಂಡ ಕಾಂಗ್ರೆಸ್ಸಿಗರು ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮೋದಿ ಟೀಕಿಸಿದಾಗ ಅವರ ಜನಪ್ರೀಯತೆ ಹೆಚ್ಚಾಗಿದೆ
ಒಬ್ಬ ಸಚಿವರು ಮೋದಿ, ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದರು. ಈಗ ಅವರು ಹೋದಲೆಲ್ಲಾ ಮೋದಿ ಮೋದಿ ಎಂಬ ಕೂಗು ಹೆಚ್ಚಾಗಿದೆ. ಯಾರು ಮೋದಿಯನ್ನು ಟೀಕಿಸುತ್ತಾರೊ ಅವರ ಜನಪ್ರೀಯತೆ ಹೆಚ್ಚಾಗಿದೆ. ಗುಜರಾತ್ ನಲ್ಲಿ ಮೋದಿಯವರು ಸಿಎಂ ಆಗಿದ್ದಾಗ ಸೋನಿಯಾಗಾಂಧಿ ಮೌತ್ ಕಾ ಸೌದಾಗರ್ ಎಂದರು ಅಲ್ಲಿ ಮೋದಿಯವರು ಹೆಚ್ಚಿನ ಸ್ಥಾನ ಗೆದ್ದು ಸಿಎಂ ಆದರು, ಮಣಿಶಂಕರ ಅಯ್ಯರ್ ಅಂತ ಒಬ್ಬ ಕಾಂಗ್ರೆಸ್ ಲೀಡರ್ ಮೋದಿ ಚಾ ಮಾರುವ ಹುಡುಗ ಅಂದರು, ಇಡಿ ದೇಶದ ಜನರು ಮೋದಿಯವರ ಪರವಾಗಿ ನಿಂತು ಪ್ರಧಾನಮಂತ್ರಿ ಮಾಡಿದರು. ಬಿಹಾರ್ ದ ಲಾಲೂ ಪ್ರಸಾದ್ ಯಾದವ್ ಮೋದಿಗೆ ಪರಿವಾರ ಇಲ್ಲ ಅಂದರು, ಇಡಿ ದೇಶವೇ ಅವರ ಪರಿವಾರ ಅಂತ ಎದ್ದು ನಿಂತರು ಎಂದು ಹೇಳಿದರು.
ಮತ್ತೊಮ್ಮೆ ಮೋದಿ ಬಂದರೆ ಅವರು ಮಾಡಿರುವ ಭ್ರಷ್ಟಾಚಾರ ಹೊರಗೆ ಬಂದು ಅವರು ಒಳಗೆ ಹೋಗುವ ಭಯ ಇದೆ. ಹೀಗಾಗಿ ಕಾಂಗ್ರೆಸ್ ಪರಿವಾರದವರಿಗೆ ಭಯ ಶುರುವಾಗಿದೆ. ರಾಜ್ಯದಲ್ಲಿಯೂ ಬಿಜೆಪಿ 28 ಸ್ಥಾನ ಗೆದ್ದರೆ ಅವರ ಸರ್ಕಾರವೂ ಉಳಿಯುವ ಅನುಮಾನ ಇದೆ. ಅದಕ್ಕೆ ಸಿಎಂ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ. ಅವರ ಕ್ಷೇತ್ರದಲ್ಲಿ ಹೆಚ್ಚು ಲೀಡ್‌ಕೊಡದಿದ್ದರೆ ತಮ್ಮ ಕುರ್ಚಿ ಉಳಿಯುವುದಿಲ್ಲ ಅಂತ ಅವರೇ ಹೇಳಿದ್ದಾರೆ.
ಮೋದಿಯವರ ಋಣ ತೀರಿಸಬೇಕು
ಮೋದಿಯವರು ಮನೆ ಮನೆಗೆ ನೀರು ಕೊಟ್ಟಿದ್ದಾರೆ. ಐದು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಕೊವಿಡ್ ನಲ್ಲಿ ಎಲ್ಲರಿಗೂ ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅವರಿಗೆ ಒಂದು ಧನ್ಯವಾದ ಹೇಳಬೇಕು. ದೇಶಕ್ಕೆ ಭವ್ಯ ಭವಿಷ್ಯ ನೀಡುವ ಆರ್ಥಿಕ ಸುಭದ್ರತೆ ನೀಡುವ, ದೀನ ದಲಿತರ ಉದ್ದಾರ ಮಾಡುವ ನಾಯಕತ್ವಕ್ಕೆ ನಮ್ಮದು ಒಂದು ಸೇವೆ ಇರಲಿ ಎಂದು ಅವರಿಗೆ ಮತ ಹಾಕಬೇಕು. ಈ ಮೂಲಕ ಅವರ ಋಣ ತೀರಿಸಬೇಕು ಎಂದು ಹೇಳಿದರು.
ಬಿಸಿಪಿ ಬಂಡಾಯ ನಾಯಕ
ಹಿರೆಕೇರೂರಿನಲ್ಲಿಯೂ ಬಿಜೆಪಿಯ ಅಲೆ ಇದೆ. ಇಲ್ಲಿ ಸಂಘರ್ಷದ ರಾಜಕಾರಣ ಇದೆ. ಬಿ ಸಿ ಪಾಟೀಲರು ಬಂಡಾಯ ನಾಯಕರು ಅವರು ಬರಗಾಲ ಇದ್ದಾಗ ಹಿರೆಕೇರೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆಗ ವಿ.ಎಸ್ ಕೌಜಲಗಿ ಕೃಷಿ ಸಚಿವರು ಅವರು ಎಲ್ಲರನ್ನು ಹಿಂಡಲಗಾ ಜೈಲಿಗೆ ಹಾಕಿದರು. ನಾನು ಎರಡು ಹೊರಾಟಗಳನ್ನು ನೋಡಿದ್ದೇನೆ ನವಲಗುಂದ ನರಗುಂದ ಬಂಡಾಯ ಆಗಿನ ಕಾಂಗ್ರೆಸ್ ಸರ್ಕಾರ ಗೊಲಿಬಾರ ಮಾಡಿಸಿ ರೈತರನ್ನು ಬಳ್ಳಾರಿ ಜೈಲಿಗೆ ಹಾಕಿದ್ದರು. ಬಿ.ಸಿ. ಪಾಟೀಲರು ಜೈಲಿಗೆ ಹೋಗಿ ಬಂದ ನಂತರ ಜೈಲಿನಿಂದ ಬಂದ ರೈತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು ಎಂದು ಹೇಳಿದರು.
ಸರ್ಕಾರ ದಿವಾಳಿಯಾಗಿದೆ
ನಾವು ಅಧಿಕಾರದಲ್ಲಿದ್ದಾಗ ಮಡ್ಲೂರು ಏತ ನೀರಾವರಿ ಯೋಜನೆ ಜಾರಿಮಾಡಿ ಕೆರೆಗೆ ನೀರು ತಂಬಿಸಿದೆವು. ಹಾವೇರಿ ಜಿಲ್ಲೆಯಲ್ಲಿ ಎಂಟು ಏತ ನೀರಾವರಿ ಯೋಜನೆ ಅಂತಿಮ ಹಂತದಲ್ಲಿವೆ ಅವುಗಳನ್ನು ಪೂರ್ಣಗೊಳಿಸಲು ಈಗಿನ ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಈ ಸರ್ಕಾರ ದಿವಾಳಿಯಾಗಿದೆ. ಅನೇಕ ಸರ್ಕಾರಿ ನೌಕರರ ಸಂಬಳ ಆಗುತ್ತಿಲ್ಲ. ಅಷ್ಟು ಸಂಕಷ್ಟ ಈ ಸರ್ಕಾರದಲ್ಲಿದೆ ಎಂದರು.
ಹಿರೇಕೇರೂರು ಜನರು ರಾಜಕೀಯವಾಗಿ ಬಹಳ ಪ್ರಬುದ್ದ ರಾಗಿದ್ದಾರೆ. ಇವರು ಇಂದು ಯೋಚಿಸಿದರೆ ಬೇರೆಯವರು ಅದನ್ನು ನಾಳೆ ಯೋಚಿಸುತ್ತಾರೆ ಅಷ್ಟೊಂದು ಪ್ರಬುದ್ದ ರಾಗಿದ್ದಾರೆ. ಈ ಚುನಾವಣೆ ನಂತರ ಹಿರೆಕೇರೂರಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ. ನಾನು ಎಂಪಿಯಾಗಿ ಅಷ್ಟೇ ಅಲ್ಲದೇ ಎಂಎಲ್ ಎ ಕೂಡ ಆಗಿ ಬಿಸಿ ಪಾಟೀಲರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ