*ಅನ್ನಭಾಗ್ಯ ಅಕ್ಕಿ ಸಾಗಾಣೆ ಬಂದ್: ಇಂದು ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ ಲಾರಿ ಮಾಲಿಕರ ಮುಷ್ಕರ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಣಿಕೆ ಲಾರಿಗಳು ಮುಷ್ಕರಕ್ಕೆ ನಿರ್ಧರಿಸಿವೆ. ರಾಜ್ಯ ಸರ್ಕಾರ ಕೋಟಿ ಕೋಟಿ ಹಣ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಧರಣಿ ನಡೆಸಲು ಮುಂದಾಗಿದ್ದಾರೆ.
ಅನ್ನಭಾಗ್ಯ ಲಾರಿ ಮಾಲೀಕರಿಗೆ 250 ಕೋಟಿ ಹಣವನ್ನು ಪಾವತಿ ಮಾಡದೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಕಳೆದ 5-6 ತಿಂಗಳಿಂದ ಲಾರಿ ಮಾಲೀಕರಿಗೆ, ಚಾಲಕರಿಗೆ ಬಿಲ್ ಗಳು ಪಾವತಿಯಾಗಿಲ್ಲ. ಈ ಹಿಂದೆಯೇ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಎಚ್ಚರಿಕೆ ನೀಡಿದ್ದರು. 15 ದಿನಗಳ ಒಳಗಾಗಿ ಹಣ ಬಿಡುಗಡೆ ಮಾಡದಿದ್ದರೆ ಮುಷಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದೀಗ ಗಡುವು ಮುಗಿದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಆಕ್ರೋಶ ಗೊಂಡಿರುರುವ ಲಾರಿ ಮಾಲೀಕರು, ಚಾಲಕರು ಇಂದು ಮಧ್ಯರಾತ್ರಿಯಿಂದಲೇ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಅನ್ನಭಾಗ್ಯ ಅಕ್ಕಿ ಸಾಗಣೆ ಲಾರಿಗಳು ಲೋಡ್ ಆಗಿದ್ದರೂ ನಿಂತಲ್ಲೇ ನಿಂತಿವೆ. ಇಂದು ಮಧ್ಯರಾತ್ರಿಯಿಂದ ಅನ್ನಭಾಗ್ಯ ಅಕ್ಕಿ ಸಾಗಾಣೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಬೇಡಿಕೆ ಈಡೆರಿಕೆಯಾಗುವವರೆಗೂ ಅನಿರ್ಧಿಷಾವಧಿವರೆಗೆ ಲಾರಿ ಮುಷ್ಕರ ಆರಂಭಿಸುವುದಾಗಿ ತಿಳಿಸಿದ್ದಾರೆ.