*ತಮಿಳುನಾಡಿನಿಂದ ಬಂದು ಇಲ್ಲಿ ನಮಗೆ ಹೇಳಬೇಕಾ? ಅಣ್ಣಾಮಲೈ ಏನ್ ಹೀರೋನಾ?; ಸ್ವಪಕ್ಷ ನಾಯಕರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ*

ಸೋಲಿನ ಹೊಣೆ ಹೊತ್ತು ರಾಜ್ಯಾದ್ಯಕ್ಷರು ರಾಜೀನಾಮೆ ಕೊಡಬೇಕು; ಕಾರ್ಯಕರ್ತರಿಗೆ ಗದರುವುದಲ್ಲ ಎಂದು ಕಿಡಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ವಿರುದ್ಧ ನಾನು ಯಾವತ್ತೂ ಮಾತನಾಡುತ್ತಿಲ್ಲ, ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವುದು ತಪ್ಪು ಎಂದು ನನಗೆ ಗೊತ್ತಿದೆ. ಆದರೆ ಕೆಲವೊಂದು ದೌರ್ಬಲ್ಯಗಳ ಬಗ್ಗೆ ಮಾತನಾಡಬೇಕಿದೆ. ಅನಿವಾರ್ಯವಾಗಿ ನಾನಿಂದು ಮಾತನಾಡುತ್ತಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಯಾರಿಗೂ ಅಪಮಾನ ಮಾಡುವ ಉದ್ದೇಶ ನನಗಿಲ್ಲ. ಆದರೆ ಕೆಲ ವಿಚಾರಗಳನ್ನು ಹೇಳಬೇಕಾಗಿದೆ. ಪಕ್ಷದ ಹಿರಿಯ ನಾಯಕರನ್ನೇ ಬಿಜೆಪಿ ಕಡೆಗಣಿಸಿತು. ಯಡಿಯೂರಪ್ಪ ಪರ ಮಾತನಾಡಿದರೆ ಪಕ್ಷ ವಿರೋಧಿ ಅಂತಾರೆ, ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಶಹಬ್ಬಾಸ್ ಅಂತಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ನಷ್ಟ ಬೇರೆಯವರಿಗಲ್ಲ, ಪಕ್ಷಕ್ಕೆ. ಇವರಿಗೆ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಮುಖ ಬೇಕು. ಅಧಿಕಾರ ಎಂಜಾಯ್ ಮಾಡಲು ಯಡಿಯೂರಪ್ಪ ಬೇಡ. ಯಡಿಯೂರಪ್ಪನವರೇ ಸಿಎಂ ಆಗಿದ್ದಿದ್ದರೆ ಇಂದು ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಎಲ್ಲರಿಗೂ ಅನ್ಯಾಯ ಮಾಡಿದರು. 70 ಹೊಸಬರಿಗೆ ಅವಕಾಶ ಅಂತಾ ನಿಮ್ಮ ಚೇಲಾಗಳಿಗೆ ಟಿಕೆಟ್ ಕೊಟ್ರಾ? ಅಣ್ಣಾಮಲೈ ತಮಿಳುನಾಡಿನಿಂದ ಬಂದು ಇಲ್ಲಿ ನಮಗೆ ಹೇಳಬೇಕಾ? ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಮಾರ್ಗದರ್ಶನ ಕೊಡ್ತಾರೆ. ಅಣ್ಣಾಮಲೈ ಏನ್ ಹೀರೋನಾ? ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ 6 ಖಾತೆ ಖಾಲಿಯಿದ್ದರೂ ಯಾರಿಗೂ ಸಚಿವ ಸ್ಥಾನ ಕೊಡಲಿಲ್ಲ.ಹಣ ಮಾಡುವುದಕ್ಕೆ ಒಬ್ಬರಿಗೆ ಎರಡೆರಡು ಖಾತೆ ಕೊಟ್ರಾ? ಅಭಿಪ್ರಾಯ ಹಂಚಿಕೊಳ್ಳಲು ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಿಲ್ಲ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣೆಸಿದರು. ಬಸವರಾಜ್ ಬೊಮ್ಮಾಯಿ ಅವರ ಕೈ ಕಟ್ಟಿ ಹಾಕಿದರು. ಓಡಾಡಿಸಿ ಅಲೆದಾಡಿಸಿ ಟಿಕೆಟ್ ಕೊಟ್ಟರು. ನಮ್ಮ ಪ್ರಣಾಳಿಕೆ ಅಂಶಗಳು ಜನರಿಗೆ ತಲುಪಲೇ ಇಲ್ಲ, ಇತ್ತ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಾ ಹೋದರು. ಚುನಾವಣೆ ಸೋಲಿನ ಹೊಣೆಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ಕೊಡಬೇಕು. ಸಭೆಗಳಲ್ಲಿ ಕಾರ್ಯಕರ್ತರನ್ನು ಗದರುವುದನ್ನು ಬಿಡಿ. ಇನ್ನಾದರೂ ಬಿಜೆಪಿಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯರನ್ನು ಗಣನೆಗೆ ತೆಗೆದುಕೊಂಡರೆ ಪಕ್ಷಕ್ಕೆ ಒಳಿತು ಎಂದು ಸಲಹೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ