ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಹೊಡೆತಕ್ಕೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸಾರ್ಕಾರ ಪತನವಾಗಿದೆ. ವಿಶ್ವಾಸಮತ ಸಾಬೀತಿಗೂ ಮುನ್ನವೇ ಸಿಎಂ ಕಮಲ್ ನಾಥ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ.

ಇಂದು ಸಂಜೆ 5 ಗಂಟೆ ಮೊದಲು ಮಧ್ಯ ಪ್ರದೇಶ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ರಾತ್ರಿ 16 ಕಾಂಗ್ರೆಸ್‌ ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ಅಂಗೀಕರಿಸಿದ್ದರು. ಇದಕ್ಕೂ ಮೊದಲು ಅವರು 6 ಸಚಿವರು ರಾಜೀನಾಮೆ ನೀಡಿದ್ದರು. ಈ ಮೂಲಕ ಕಾಂಗ್ರೆಸ್ ನ ಒಟ್ಟು 22 ಶಾಸಕರು ರಾಜೀನಾಮೆ ನೀಡಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು.

ಸರ್ಕಾರ ಅಲ್ಪಮತಕ್ಕೆ ಕುಸಿದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಮಲ್‌ನಾಥ್‌, ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀದುವುದಾಗಿ ಘೋಷಿಸಿದರು. ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ಮತ್ತು ಬಂಡಾಯ ಶಾಸಕರ ವಿರುದ್ಧ ಹರಿಹಾಯ್ದ ಕಮಲ್ ನಾಥ್, ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಇಟ್ಟುಕೊಂಡಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಜನತೆ ಅವರನ್ನು ಕ್ಷಮಿಸೋದಿಲ್ಲ ಎಂದು ಕಿಡಿಕಾರಿದ್ದಾರೆ.

230 ಶಾಸಕ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 116 ಶಾಸಕ ಬಲದ ಅಗತ್ಯವಿತ್ತು. 114 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್‌, ಪಕ್ಷೇತರರ ನೆರವಿನೊಂದಿಗೆ ಸರ್ಕಾರ ರಚಿಸಿತ್ತು. ಆದರೆ ಇದೀಗ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ರಾಜಿನಾಮೆ ನೀಡಿದ್ದಾರೆ. ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 107ಕ್ಕೆ ಬಂದು ನಿಂತಿದೆ. ಹೀಗಾಗಿ, 109 ಶಾಸಕ ಬಲ ಹೊಂದಿರುವ ಬಿಜೆಪಿಗೆ ಸರಳ ಬಹುಮತ ಸಿಕ್ಕಂತಾಗಿದೆ. ಶಿವರಾಜ್‌ ಸಿಂಗ್ ಚೌಹಾಣ್ ಗೆ ಮತ್ತೊಮ್ಮೆ ಸಿಎಂ ಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button