ಎಂ ಟೆಕ್ ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆ: ಪ್ರೊ ವಿದ್ಯಾಶಂಕರ್

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕೆಎಲ್‌ಎಸ್ ಶಿಕ್ಷಣ ಸಂಸ್ಥೆಯ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ತಾಂತ್ರಿಕ ಶಿಕ್ಷಣದ ಮೇಲೆ ಸಂಶೋಧನೆಯ ಪರಿಣಾಮ” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿಟಿಯು ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ, ವಿಟಿಯು ಬರುವ ದಿನಗಳಲ್ಲಿ ಎಂಟೆಕ್‌ನ ಎಲ್ಲ ವಿಭಾಗಗಳ ಪಠ್ಯಕ್ರಮ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಥಮ ವರ್ಷದ ಪಠ್ಯಕ್ರಮ ಎಲ್ಲ ವಿಭಾಗಗಳಿಗೆ ಒಂದೇ ತೆರನಾಗಿ ಇರಲಿದ್ದು , ಇನ್ನು ಮುಂದೆ ಎಂ.ಟೆಕ್. ಬ್ರಾಂಚ್ ಗಳಿಗೆ ಅನುಗುಣವಾಗಿ ಪ್ರಾವೀಣ್ಯತೆ ಪಡೆದ ವರ್ಗಿಕರಣ ಇರಲಿದ್ದು , ಇಂಟರ್ನ್ಶಿಪ್ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ನಾವು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ. ಅದರಂತೆ ಸಂಶೋಧನೆ ಕೈಗೊಳ್ಳುವ ಕಾಲೇಜುಗಳ ಪ್ರಾಧ್ಯಾಪಕರಿಗೆ ವಿಟಿಯು ಧನಸಹಾಯ ನೀಡಲಿದ್ದು, ವಿಟಿಯು ಜಾಗತಿಕ ಮಟ್ಟದಲ್ಲಿ ಮನ್ನಣೆಗಳಿಸಲು ಇದು ಪೂರಕವಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ, ಪುಣೆಯ ನಿಕ್ ಮಾರ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸುಶ್ಮಾ ಕುಲಕರ್ಣಿ ಮಾತನಾಡಿ, ವೈಜ್ಞಾನಿಕ ಸಂಶೋಧನೆ ಪರಿಕಲ್ಪನೆಯನ್ನು ನೀಡಿ , ದಿನ ನಿತ್ಯದ ಜೀವನದಲ್ಲಿ ನಡೆಯುವ ಸಂಶೋಧನೆಗಳ ಉದಾಹರಣೆ ಗಳನ್ನೂ ನೀಡಿ ವಿವರಿಸಿದರು.
ಕೆಎಲ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ ಗಣಾಚಾರಿ ಮಾತನಾಡಿ, ಶಿಕ್ಷಣದಲ್ಲಿ ಸಂಶೋಧನೆಯ ಪಾತ್ರ ಮಹತ್ವದಾಗಿದೆ. ಈ ಕಾರಣಕ್ಕೆ ತಾಂತ್ರಿಕ ಶಿಕ್ಷಣ ಪ್ರಾಧ್ಯಾಪಕರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಸಂಶೋಧನೆಗೆ ಜಿಐಟಿ ಮೊದಲಿನಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬರುವ ದಿನಗಳಲ್ಲೂ ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.
ಡಾ ಬಸವಕುಮಾರ್ ಕೆ .ಜಿ . ನಿರ್ದೇಶಕರು , ಸಂಶೋಧನೆ, ವಿಟಿಯು ಬೆಳಗಾವಿ, ಜಿಐಟಿಯ ಪ್ರಾಚಾರ್ಯ ಡಾ. ಎಂ.ಎಸ್. ಪಾಟೀಲ, ಡಾ ಶ್ವೇತಾ ಗೌಡರ್ ಡೀನ್ ರಿಸರ್ಚ್ , ಡಾ . ಆರ್ ಎಂ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ