*ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ರಾಣಿಯಂತೆ ಮೆರೆಸುತ್ತೇವೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ: ಇಡೀ ಏಷ್ಯಾದಲ್ಲೇ ಹೆಸರು ಮಾಡಿದ್ದ ಮಲ್ಲಪ್ರಭಾ ಸಕ್ಕರೆ ಕಾರ್ಖಾನೆ (ರಾಣಿ ಶುಗರ್ಸ್) ಯನ್ನು ಪುನಃ ಹೆಸರಿಗೆ ತಕ್ಕಂತೆ ರಾಣಿಯಂತೆ ಮೆರೆಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕಾರ್ಖಾನೆಯು 55 ವರ್ಷದ ಹಿರಿಯಣ್ಣನ ರೀತಿ ಇದೆ. ನಮ್ಮ ಸಂಪೂರ್ಣ ಪೆನೆಲ್ ಆರಿಸುವ ಮೂಲಕ ರೈತರು ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ವರ್ಷ 4 ಲಕ್ಷ ಟನ್ ಕ್ರಷಿಂಗ್ ಆಗಬೇಕು. ಮುಂದಿನ ಸಾಲಿನಿಂದ ಕಾರ್ಮಿಕರಿಗೆ ದೀಪಾವಳಿ ಬೋನಸ್ ಕೊಡಲೇಬೇಕು. ಶೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ನೀಡಬೇಕು. ಕಾರ್ಖಾನೆಯನ್ನು ಗತವೈಭವಕ್ಕೆ ಕೊಂಡೊಯ್ದು ರಾಣಿಯಂತೆ ಮೆರೆಸಲಾಗುವುದು ಎಂದು ಅವರು ತಿಳಿಸಿದರು.

ಅತ್ಯಂತ ಹಳೆಯದಾದ, ಹಿರಿಯಣ್ಣನ ರೀತಿಯಲ್ಲಿರುವ ನಾಲ್ಕು ತಾಲೂಕುಗಳ ರೈತರ ಜೀವನಾಡಿಯಾಗಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ ನೀಡಿ, ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ನಮ್ಮ ಗುರಿ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಮೊದಲ ಕಬ್ಬು ನುರಿಸುವ ಹಂಗಾಮಿಗೆ ಇಂದು ಪೂಜೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ, ಈಗ ನಿಮಗೆ ಸಿಕ್ಕಿರುವ ಅಧಿಕಾರ ಒಂದು ದೊಡ್ಡ ಜವಾಬ್ದಾರಿ ಎನ್ನುವುದನ್ನು ಮರೆಯದೆ, ಸಾವಿರಾರು ರೈತರು ತಮ್ಮ ಭವಿಷ್ಯವನ್ನು ನಿಮ್ಮ ಕೈಗೆ ಕೊಟ್ಟಿದ್ದಾರೆ ಎನ್ನುವ ಪ್ರಜ್ಞೆಯಿಂದ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು ಎನ್ನುವ ಸೂಚನೆಯನ್ನು ಸಹ ಕೊಡುತ್ತಿದ್ದೇನೆ. ನಾನು ಮತ್ತು ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ವಿಠ್ಠಲ ಹಲಗೆಕರ್ ಕಾಲಕಾಲಕ್ಕೆ ಬಂದು ಎಲ್ಲವನ್ನೂ ಗಮನಿಸುತ್ತೇವೆ ಎಂದು ಸಚಿವರು ಹೇಳಿದರು.

ಯಾವುದೇ ಅಧಿಕಾರ ಗಳಿಸುವುದು ಮುಖ್ಯವಲ್ಲ, ಆದರೆ ಆ ಅಧಿಕಾರದಿಂದ ಎಷ್ಟು ಜನರ ಕಣ್ಣೀರು ಒರೆಸಿದ್ದೀರಿ ಎನ್ನುವುದು ಬಹಳ ಮುಖ್ಯ. ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿದರೆ ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಮಲಪ್ರಭಾ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿ ಈಗ ಐದೂವರೆ ದಶಕಗಳಾಗಿವೆ. ನಮ್ಮ ಕುಟುಂಬದ ಹಿರಿಯರೂ ಸೇರಿದಂತೆ ಈ ಭಾಗದ ಅನೇಕ ಮುಖಂಡರ ದೂರದೃಷ್ಟಿಯ ಫಲವಾಗಿ ತಲೆ ಎತ್ತಿರುವ ಕಾರ್ಖಾನೆ ಇದು. ಒಂದು ಕಾಲದಲ್ಲಿ ಕಾರ್ಖಾನೆಯ ಗತವೈಭವವನ್ನು ಈ ಭಾಗದ ರೈತರೆಲ್ಲ ಕಂಡಿದ್ದೀರಿ, ಆದರೆ ಯಾವುದೋ ಕಾರಣದಿಂದ ಕಾರ್ಖಾನೆಯ ಆಡಳಿತ ಸ್ವಲ್ಪ ಹಾದಿ ತಪ್ಪಿ, ನಾವು – ನೀವೆಲ್ಲ ಚಿಂತಿಸುವ ಪರಿಸ್ಥಿತಿಗೆ ತಲುಪಿದೆ. ಆದರೆ ಹಳೆಯದನ್ನೆಲ್ಲ ಕೆದಕಲು ಹೋಗುವುದಿಲ್ಲ. ಈಗ ಇಂತಹ ಕಾರ್ಖಾನೆಯನ್ನು ಮತ್ತೊಮ್ಮೆ ಉತ್ತುಂಗಕ್ಕೇರಿಸಿ, ಈ ಭಾಗದ ರೈತರ ಬಾಳನ್ನು ಹಸನಾಗಿಸುವ ಜವಾಬ್ದಾರಿ ಹೊಸ ಆಡಳಿತ ಮಂಡಳಿಯ ಹೆಗಲಿಗೆ ಬಂದಿದೆ ಎಂದು ಹೇಳಿದರು.
ನಾವೆಲ್ಲ ಸೇರಿ ಸರಕಾರದ ನೆರವನ್ನು ತರುವ ಕೆಲಸವನ್ನು ಮಾಡುತ್ತೇವೆ. ರೈತರ ಕಬ್ಬಿಗೆ ಸಕಾಲಕ್ಕೆ ಯೋಗ್ಯವಾದ ದರವನ್ನು ಪಾವತಿ ಮಾಡುವ ಜೊತೆಗೆ, ಮುಂದಿನ ಸಾಲಿನ ದೀಪಾವಳಿಗೆ ಕಾರ್ಮಿಕರಿಗೆ ಬೋನಸ್ ಕೊಡುವ ಕೆಲಸವನ್ನು ಮಾಡಬೇಕು. ಎಲ್ಲ 16 ಸಾವಿರ ಶೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಮಾಡಬೇಕು. ಜೊತೆಗೆ, ರೈತರು ಚುನಾವಣೆಯಲ್ಲಿ ಮತ ನೀಡಿ ಆಯ್ಕೆ ಮಾಡಿದ್ದೀರಿ, ನಿಮ್ಮದೂ ಜವಾಬ್ದಾರಿ ಇದೆ, ಮುಂದಿನ ದಿನಗಳಲ್ಲಿ ಕಾರ್ಖಾನೆಯ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನೀವೆಲ್ಲ ಸಹಕಾರ ನೀಡಬೇಕು. ಸಂಪೂರ್ಣಕಬ್ಬನ್ನು ಕಾರ್ಖಾನೆಗೆ ಹಾಕಬೇಕು. ನಾವು ನಮ್ಮ ಕುಟುಂಬದ 1200 ಟನ್ ಕಬ್ಬನ್ನು ಇದೇ ಕಾರ್ಖಾನೆಗೆ ಗಹಾಕುತ್ತೇವೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ತಾಳ್ಮೆಯಿಂದ ಎಲ್ಲರೂ ಕಾರ್ಖಾನೆಯ ಒಳಿತಿಗಾಗಿ, ಗತವೈಭವ ಮರುಕಳಿಸುವುದಕ್ಕಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಮ್ಮ ಸ್ವಂತ ಕಾರ್ಖಾನೆಯ ಬಾಯ್ಲರ್ ಪೂಜೆಗೆ ಹೋಗಲಾಗದಿದ್ದರೂ ಈ ಕಾರ್ಯಕ್ರಮಕ್ಕೆ ಅಭಿಮಾನದಿಂದ ಬಂದಿದ್ದೇನೆ. ಕಳೆದ ವರ್ಷ 160 ಟನ್ ನುರಿಸಲಾಗಿತ್ತು, ಅನೇಕ ರೈತರು ಹಿಂದಿನಿದಂಲೂ ಕಾರ್ಖಾನೆಯ ಉಳಿವಿಗಾಗಿ ಕೊಡುಗೆನೀಡುತ್ತ ಬಂದಿದ್ದೀರಿ. ರೈತರ ಸಂಕಷ್ಟ ನನಗೆ ಗೊತ್ತು, ರಜೆ ಇಲ್ಲ, ಚಳಿ, ಮಳೆ, ಬಿಸಿಲು ಇಲ್ಲದೆ ಕೆಲಸ ಮಾಡಲೇಬೇಕು. ಹಾಗಾಗಿ ರೈತರು ಹಾಗೂ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಡಳಿತ ಮಂಡಳಿಗೆ ಹೇಳಿದ್ದೇನೆ ಎಂದೂ ಅವರು ತಿಳಿಸಿದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಚನ್ನರಾಜ ಹಟ್ಟಿಹೊಳಿ ಅನುಭವ ಹೊಂದಿದ್ದಾರೆ. ಈ ಕಾರ್ಖಾನೆಯನ್ನು ಉತ್ತಮವಾಗಿ ಮುನ್ನಡೆಸುವ ವಿಶ್ವಾಸವಿದೆ. ಎಲ್ಲರೂ ಜೊತೆಯಲ್ಲಿ ಕೂಡಿಕೊಂಡು ಕೆಲಸ ಮಾಡೋಣ, ಗತವೈಭವ ಮರುಕಳಿಸುವಂತೆ ಮಾಡೋಣ ಎಂದು ಹೇಳಿದರು.
ಉತ್ತಮ ಕ್ರಷಿಂಗ್ ಆದರೆ ಬೋನಸ್ ಹಾಗೂ ರಿಯಾಯಿತಿ ದರದಲ್ಲಿ ಸಕ್ಕರೆ ಸಿಗುತ್ತದೆ. 4 ಲಕ್ಷ ಟನ್ ಕ್ರಷಿಂಗ್ ಮಾಡಲೇಬೇಕು, ಎಲ್ಲರೂ ಕಬ್ಬು ಕಳಿಸಿ ಸಹಕಾರ ಮಾಡಿ ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ಎಲ್ಲರ ಸಲಹೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಕಾರ್ಖಾನೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತೇವೆ. ರೈತರು ನಿರಂತರ ಪ್ರೀತಿ ತೋರಿಸುತ್ತ ಬಂದಿದ್ದಾರೆ. ಬೇರೆ ಕಾರ್ಖಾನೆಗಳ ಜೊತೆಯಲ್ಲೇ ಇಲ್ಲೂ ಕಬ್ಬು ನುರಿಸಲು ನಮ್ಮ ಕಾರ್ಖಾನೆ ಸಿದ್ಧವಾಗಿದೆ. ಕಾರ್ಮಿಕರು ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಸವಾಲಾಗಿ ಸ್ವೀಕರಿಸಿ ಸುಧಾರಣೆ ಮಾಡುತ್ತೇವೆ. ಕಾರ್ಮಿಕರ ಕ್ವಾಟರ್ಸ್ ದುರಸ್ತಿ ಮಾಡಲು ಹಣ ಮೀಸಲಿಡುತ್ತೇವೆ. ರೈತರು, ಕಾರ್ಮಿಕರ ಒಳಿತಿಗಾಗಿ ಶ್ರಮವಹಿಸಿ ಕೆಲಸ ಮಾಡಲಿದ್ದೇವೆ ಎಂದರು.

ಬಳಿಕ ಮಾತನಾಡಿದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು, ಮಠಾಧೀಶರು ನಿಮ್ಮ ಜೊತೆಗಿದ್ದೇವೆ. ಚನ್ನರಾಜ ಹಟ್ಟಿಹೊಳಿ ಬಹಳ ವಿಶ್ವಾಸವಿಟ್ಟು ಕಾರ್ಖಾನೆಗೆ ಬಂದಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡೋಣ ಎಂದರು.
ಕಾದರವಳ್ಳಿ ಸೀಮೀಮಠದ ಡಾ. ಪಾಲಾಕ್ಷ ಶಿವಯೋಗಿಶ್ವರ ಸ್ವಾಮೀಜಿ, ಕಾರ್ಖಾನೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಿ, ರೈತರ ಜೀವನ ಹಸನಾಗುವಂತೆ ಮಾಡೋಣ ಎಂದರು.
ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾರ್ಖಾನೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ಕಾಡಾ ಅಧ್ಯಕ್ಷ ಯುವರಾಜ ಕದಂ, ಶಂಕರಗೌಡ ಪಾಟೀಲ, ಬಸವರಾಜ ಸಾಣಿಕೊಪ್ಪ, ಸುರೇಶ ಇಟಗಿ, ಅಡಿವೇಶ ಇಟಗಿ, ಕಾರ್ಖಾನೆಯ ನಿರ್ದೇಶಕರು, ರೈತರು ಮತ್ತು ಕಾರ್ಮಿಕರು ಇದ್ದರು.
ಎಲ್ಲ ಮಠಾಧೀಶರು ಪ್ರತ್ಯೇಕವಾಗಿ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸಿ, ಶುಭ ಕೋರಿದರು. ಇದೇ ವೇಳೆ ಕಾರ್ಖಾನೆಗೆ ಹಿಂದಿನಿಂದಲೂ ಸಹಕಾರ ನೀಡುತ್ತ ಬಂದಿರುವ ರೈತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಸ್ಥಳೀಯ ಅಧಿದೇವತೆ ಬಂಡೆಮ್ಮಾ ದೇವಿಗೆ ಪೂಜೆ ಸಲ್ಲಿಸಲಾಯಿತು.



