*ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಬುಲಾವ್ ನೀಡಿದ ಮಲ್ಲಿಕಾರ್ಜುನ್ ಖರ್ಗೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸನಲ್ಲಿ ಸಧ್ಯ ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದೆ. ಈ ಮಧ್ಯೆ ಬೆಂಗಳೂರಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿಗೆ ಕರೆದಿದ್ದು, ಅಧಿಕಾರ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಒಂದಷ್ಟು ಶಾಸಕರು ದೆಹಲಿಗೆ ಪಯಣಿಸಿದ್ದಾರೆ. ಮಾತಿನಂತೆ ಅಧಿಕಾರ ಹಂಚಿಕೆಯಾಗಲೇ ಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಬಣ ಪಟ್ಟುಹಿಡಿದಿದೆ. ಇದೀಗ ಶಾಸಕ ಬಲಪ್ರದರ್ಶನವೂ ನಡೆಯುತ್ತಿದೆ.
ಅಧಿಕಾರ ಹಂಚಿಕೆ ಕಲಹ ತೀವ್ರಗೊಳ್ಳುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕಳೆದ ಶನಿವಾರ ದೆಹಲಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಬೇಟಿಯಾಗಿದ್ದರು. ಈ ವೇಳೆ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ರಾಹುಲ್ ಗಾಂಧಿ ಅದನ್ನು ಖರ್ಗೆಗೆ ವಹಿಸಿ ಕೈತೊಳೆದುಕೊಂಡಿದ್ದಾರೆ. ನಂತರ ದೆಹಲಿಯಲ್ಲೇ ಖರ್ಗೆಯನ್ನು ಭೇಟಿಯಾಗಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಸೂತ್ರ ಮುಂದಿಟ್ಟಿದ್ದರು. ಆದರೆ, ಖರ್ಗೆ ಮಾತ್ರ ರಾಹುಲ್ ಗಾಂಧಿ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರು.
ಈ ನಡುವೆ ಸಿದ್ದರಾಮಯ್ಯ ಪರ ಮತ್ತು ಡಿಕೆ ಶಿವಕುಮಾರ್ಗೆಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. ಈ ಮಧ್ಯೆ ಶುಕ್ರವಾರ ರಾತ್ರಿ ಡಿಸಿಎಂ ಅವರ ಸದಾಶಿವನಗರದ ನಿವಾಸಕ್ಕೆ ಶಾಸಕ ಸಿಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್ ಹಾಗೂ ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮಾಜಿ ಸಂಸದ ಶಿವರಾಮೇಗೌಡ, ಕಾಂಗ್ರೆಸ್ ಮುಖಂಡ ಆನಂದಗಡ್ಡದೇವರ ಮಠ ಭೇಟಿ ಕೊಟ್ಟಿದ್ದಾರೆ. ಡಿಕೆಶಿ ಮತ್ತು ಡಿಕೆ ಸುರೇಶ್ ಜೊತೆ ಕೆಲಕಾಲ ಮಾತುಕತೆ ನಡೆಸಿ ಮಾತುಕತೆ ನಡೆಸಿದ್ದಾರೆ.
ಐದು ವರ್ಷ ಕೆಲಸ ಮಾಡಲು ಜನಾದೇಶವಿದೆ, ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನವೆಂಬರ್ ಕ್ರಾಂತಿ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಸಿಎಂ ಹೇಳಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ಸಿನಲ್ಲಿ ಬೇಕಾದಷ್ಟು ಬೆಳವಣಿಗೆಗಳು ನಡೆಯುತ್ತಿವೆ.



