*ಪ್ರಜ್ವಲ್ ಶೆಟ್ಟಿ ಸಾಧನೆಗೆ ದೇಶವೇ ಹೆಮ್ಮೆ*: *ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ಮಿಂಚಿದ ಕರಾವಳಿ ಯುವಕ!*

ಪ್ರಗತಿವಾಹಿನಿ ಸುದ್ದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿ, ಇದೀಗ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಹಾರಿಸುವ ಹಂತಕ್ಕೆ ಬೆಳೆದಿರುವ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದೇಶದ ಗಮನ ಸೆಳೆದಿದ್ದಾರೆ. ಕರಾವಳಿಯ ಈ ಯುವಕನ ಸಾಧನೆ ಮಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದೆ.
ಮಂಗಳೂರಿನ ಅರೇಕಳ ಉಳಿಡೊಟ್ಟು ರಮೇಶ್ ಶೆಟ್ಟಿ ಮತ್ತು ಕೋಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ ಪ್ರಜ್ವಲ್ ಅವರ ಸಾಧನೆಯ ಹಿಂದೆ ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಕಲಿಕೆಯ ಹಾದಿಯಿದೆ. ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕವೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಗಳಿಸಿ ರಕ್ಷಣಾ ಕ್ಷೇತ್ರದತ್ತ ಹೆಜ್ಜೆ ಇಟ್ಟಿದ್ದರು.
ಪುಣೆಯ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮೂರು ವರ್ಷಗಳ ಕಠಿಣ ತರಬೇತಿ ಪಡೆದ ಪ್ರಜ್ವಲ್, ಈ ಸಂದರ್ಭದಲ್ಲಿ ‘ಸೂಪರ್ ಡಿಮೋನಾ’ ವಿಮಾನ ಹಾರಾಟದ ತರಬೇತಿಯನ್ನೂ ಪೂರ್ಣಗೊಳಿಸಿದರು. ಬಳಿಕ ಹೈದರಾಬಾದ್‌ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ಹಾರಾಟ ತರಬೇತಿ ಪಡೆದರು. ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ತರಬೇತಿ ಪಡೆದ ಅವರು, ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಶೈಕ್ಷಣಿಕ ಸಾಧನೆಯನ್ನೂ ಮೆರೆದರು. ಇದೇ ಅವಧಿಯಲ್ಲಿ ಬಿ.ಟೆಕ್ ಪದವಿಯನ್ನೂ ಪಡೆದುಕೊಂಡರು.
ಡಿಸೆಂಬರ್ 2022ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಕಮಿಷನ್ ಆದ ಪ್ರಜ್ವಲ್, ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ಹಾಕ್ ಯುದ್ಧ ವಿಮಾನದ ತರಬೇತಿ ಪಡೆದರು. ಈ ಹಂತದಲ್ಲಿಯೂ ಅಗ್ರಸ್ಥಾನ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.
ನಂತರ ಹಲವು ಹಂತಗಳ ಕಠಿಣ ತರಬೇತಿ ಪೂರ್ಣಗೊಳಿಸಿದ ಅವರಿಗೆ ರಫೇಲ್ ಯುದ್ಧ ವಿಮಾನ ಹಾರಿಸುವ ಅವಕಾಶ ದೊರೆಯಿತು. ಅಂಬಾಲಾದಲ್ಲಿರುವ ಭಾರತೀಯ ವಾಯುಪಡೆಯ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆ್ಯರೋಸ್’ ಪಡೆಯ ಭಾಗವಾಗಿರುವ ಪ್ರಜ್ವಲ್, ರಫೇಲ್ ವಿಮಾನದ ಕನ್ವರ್ಷನ್ ತರಬೇತಿ ಪೂರ್ಣಗೊಳಿಸಿ ಪ್ರಸ್ತುತ ರಫೇಲ್ ಫೈಟರ್ ಪೈಲಟ್ ಆಗಿ ದೇಶಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ವಾಯುಪಡೆಯ 94ನೇ ಸಂಸ್ಥಾಪನಾ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ‘ವಿಂಗ್ಸ್ ಓವರ್ ಗಂಗೆ’ ವೈಮಾನಿಕ ಪ್ರದರ್ಶನದಲ್ಲೂ ಪ್ರಜ್ವಲ್ ಗಮನ ಸೆಳೆದಿದ್ದರು. ಮೂರು ರಫೇಲ್ ಯುದ್ಧ ವಿಮಾನಗಳನ್ನು ಒಳಗೊಂಡ ‘ನೀಲಕಂಠ’ ಫಾರ್ಮೇಷನ್‌ನಲ್ಲಿ ಮಧ್ಯದ ಪ್ರಮುಖ ಸ್ಥಾನದಲ್ಲಿ ವಿಮಾನ ಹಾರಿಸಿ ತಮ್ಮ ಹಾರಾಟದ ಕೌಶಲ್ಯ ಪ್ರದರ್ಶಿಸಿದ್ದರು.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಕರಾವಳಿಯ ಯುವಕನೊಬ್ಬ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನಗಳ ಪೈಲಟ್ ಆಗಿ ಬೆಳೆದಿರುವುದು ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಪ್ರಜ್ವಲ್ ಶೆಟ್ಟಿ ಅವರ ಸಾಧನೆ ಮಂಗಳೂರಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



