Kannada NewsKarnataka NewsLatest

ಬೈಕ್ ಸವಾರನ ಕುತ್ತಿಗೆ ಸುತ್ತಿದ ಮಾಂಜಾ ದಾರ; ಪ್ರಕರಣ ದಾಖಲು – ಜೂಜಾಟದ ಮೇಲೆ ದಾಳಿ 22 ಜನರ ಬಂಧನ

ಪ್ರಗತಿವಾಹನಿ ಸುದ್ದಿ, ಬೆಳಗಾವಿ – ನಗರದ ಗಾಂಧಿ ನಗರದಲ್ಲಿ ಮಾಂಜಾ(ಗಾಳಿಪಟದ)ದಾರ ಸುತ್ತಿ ವ್ಯಕ್ತಿಯ ಕೊರಳಿಗೆ ಗಾಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಾದ್ವಾರ ರಸ್ತೆ ನಿವಾಸಿ ರಾಹುಲ ಜ್ಯೋತಿಬಾ ರಾಜಗೋಳಕರ (30)  ತಮ್ಮ ಕೆಲಸ ಮುಗಿಸಿಕೊಂಡು ಮೋಟರ್ ಸೈಕಲ್ ಮೇಲೆ ಗಾಂಧಿ ನಗರ ಕಡೆಗೆ ಎನ್‌ಎಚ್-೪ ಪಕ್ಕದ ಸರ್ವಿಸ್ ರಸ್ತೆಯ ಮುಖಾಂತರ ಹೊರಟಾಗ ಒಮ್ಮಿಂದೊಮ್ಮೆಲೆ ಗಾಳಿಪಟ ಮಾಂಜಾ ದಾರ ರಾಹುಲ ರವರ ಕುತ್ತಿಗೆಗೆ ಸುತ್ತಿಕೊಂಡಿತ್ತು.

ಅವರು ತಕ್ಷಣ ಮೋಟರ್ ಸೈಕಲ್ ನಿಲ್ಲಿಸುವಷ್ಟರಲ್ಲಿ ಮಾಂಜಾ ದಾರ ಕೊರೆದು ಕುತ್ತಿಗೆ ಗಾಯವಾಗಿದೆ. ಈ ಬಗ್ಗೆ ಅವರು ನೀಡಿದ ದೂರನ್ನಾಧರಿಸಿ ಮಾಳಮಾರುತಿ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಬೆಳಗಾವಿ ನಗರದಲ್ಲಿ ಗಾಳಿಪಟ ಹಾರಿಸುವ ಮಕ್ಕಳು ಮತ್ತು ಯುವಕರು ಭಾರಿ ಗಾಯವನ್ನುಂಟು ಮಾಡುವಂತಹ ಮಾಂಜಾ ದಾರವನ್ನು ಬಳಸುತ್ತಿರುವುದರಿಂದ ಈ ಘಟನೆ ಜರುಗಿದ್ದು, ನಗರದಲ್ಲಿ ಅಂತಹ ಮಾಂಜಾ ದಾರವನ್ನು ತಯಾರಿಸುವವರ, ಮಾರುವವರ ಮತ್ತು ಅದನ್ನು ಖರೀಧಿಸಿ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತರು ಪ್ರಕಟನೆ ಮೂಲಕ ಎಚ್ಚರಿಸಿದ್ದಾರೆ.

ಇದರೊಂದಿಗೆ ನಗರದ ಸಾರ್ವಜನಿಕರು, ಪಾಲಕರು ಮತ್ತು ಪೋಷಕರು ಇಂತಹ ಮಾಂಜಾ ದಾರವನ್ನು ಬಳಸಿ ಗಾಳಿಪಟ ಹಾರಿಸದಂತೆ ತಮ್ಮ ಮಕ್ಕಳಿಗೆ ತಿಳಿಹೇಳಿ ನಿಗಾವಹಿಸಲು ಹಾಗೂ ಇದನ್ನು ತಯಾರಿಸುವವರ ಮತ್ತು ಮಾರಾಟ ಮಾಡುವವರು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಲು ಕೋರಿದ್ದಾರೆ.

ಜೂಜಾಟದ ಮೇಲೆ ದಾಳಿ

ಬೆಳಗಾವಿ ನಗರದಲ್ಲಿ  ಮಧ್ಯರಾತ್ರಿ ಜೂಜಾಟದ ಮೇಲೆ ದಾಳಿ ನಡೆಸಿದ ಪೊಲೀಸರು 22 ಜನ ಜೂಜುಕೋರರನ್ನು ಬಂಧಿಸಿ 1,85,910 ರೂ. ವಶಪಡಿಸಿಕೊಂಡಿದ್ರೂದಾರೆ.

ಬೆಳಗಾವಿ ನಗರದ ಟಿಳಕವಾಡಿ ಠಾಣಾ ವ್ಯಾಪ್ತಿಯ ರಾಜಹಂಸ ಗಲ್ಲಿಯ ಸದಾನಂದ ಮಠದ ಪಕ್ಕದ ಬೋಳದಲ್ಲಿ ಮಧ್ಯರಾತ್ರಿ ಕೆಲವರು ಹಣ ಕಟ್ಟಿ ಜೂಜಾಟ ಆಡುತ್ತಿದ್ದಾರೆಂದು ಬಂದ ನಿಖರ ಮಾಹಿತಿಯನ್ನಾಧರಿಸಿ ದಾಳಿ ನಡೆಸಲಾಗಿತ್ತು.

ಡಿಸಿಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಟಿಳಕವಾಡಿ ಪಿಐ ಹಾಗೂ ಸಿಬ್ಬಂದಿಗಳು ರಾತ್ರಿ 1.15ಕ್ಕೆ ದಾಳಿ ಕೈಗೊಂಡಿದ್ದರು. ದಾಳಿಯಲ್ಲಿ  ಮಂಜೂರ ಚೋಪಧಾರ, ಪ್ರದೀಪ ಲಾಟೂಕರ,  ಮೋಯಿಜ ಗಚವಾಲೆ,  ವಿಜಯ ಪಾಟೀಲ, ಪರಶುರಾಮ ಮೇತ್ರಿ,  ಸುಶೀಲ ಮುದೋಳಕರ, ಬಾಬು ಯಾದವ,  ಅನೀಲ ಯಳ್ಳೂರಕರ,  ಕಿಸನ ಪಾಟೀಲ, ಜಹಾಂಗೀರಖಾನ ಪಠಾಣ, ವಿಜಯ ಶಿಂದೋಳಕರ, ದೀಪಕ ಹೊನ್ಯಾಳಕರ, ಆಕಾಶ ಜಕ್ಕಾನೆ, ವಿನಾಯಕ ಗಣಾಚಾರಿ, ಸಾಗರ ಮುತಗೇಕರ, ಸಮೀರ ತಹಶೀಲ್ದಾರ,  ಸದಾನಂದ ಅಸಲ್ಕರ, ಹಿದಾಯಶೇಕ ಶೇಖ, ಪರಶುರಾಮ ಲೋಹಾರ, ಅಭಿ ಭೋಗಾರ, ವಾಸಿಮ್ ಪತ್ತೆ ಮತ್ತು  ಸಂದೀಪ ಮುದೋಳಕರ ಹೀಗೆ ಒಟ್ಟು ೨೨ ಜನ ಜೂಜುಕೋರರನ್ನು ಬಂಧಿಸಲಾಗಿದೆ.

ಅವರಿಂದ 1,85,910 ರೂ. ಹಣ, 14 ಮೋಬೈಲ್‌ಗಳನ್ನು ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿತರ ವಿರುದ್ಧ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜೂಜಾಟದಲ್ಲಿ ತೊಡಗಿದ ಜೂಜುಕೋರರ ಮೇಲೆ ದಾಳಿ ಕೈಗೊಂಡು ದಸ್ತಗಿರಿ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಇಂತಹ ಜೂಜಾಟ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುವ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಅಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಲು ಇಲಾಖೆಯ ಅಧಿಕಾರಿಗಳು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button