Belagavi NewsBelgaum NewsKannada NewsKarnataka News

*ಕ್ಯಾಂಟೋನ್ಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತು ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಪ್ರದೇಶದ ಕ್ಯಾಂಟೋನ್ಮೆಂಟ್ ಏರಿಯಾದ ವಸತಿ ಪ್ರದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ವಿಲಿನಗೊಳಿಸುವುದಕ್ಕೆ ಸಂಬಂಧಿಸಿದಂತೆ ಕ್ಯಾಂಟೋನ್‌ಮೆಂಟ್ ಬೋರ್ಡನ ಒಟ್ಟು 1763.78 ಎಕರೆ ಜಾಗೆಯ ವಿವಿಧ ಅಂಶಗಳನ್ನು ಒಳಗೊಂಡಂತೆ ಸಂಪೂರ್ಣ ಸಮೀಕ್ಷೆ ಕೈಗೊಂಡು 15 ದಿನಗಳೊಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದ್ದಾರೆ.

ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಂಗಳವಾರ(ಜು.,16) ಜರುಗಿದ ವಿಡಿಯೋ ಸಂವಾದ ಸಭೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ಕ್ಯಾಂಟೋನ್‌ಮೆಂಟ್  ಸಿವ್ಹಿಲ್ ಏರಿಯಾಗಳನ್ನು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ವರ್ಗಾಯಿಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಕ್ಯಾಂಟೋನ್‌ಮೆಂಟ್  ಸಿವ್ಹಿಲ್ ಏರಿಯಾಗಳನ್ನು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ವರ್ಗಾಯಿಸುವ ಜಿಲ್ಲಾ ಮಟ್ಟದ ಜಂಟಿ ಸಲಹಾ ಸಮಿತಿ ರಚಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೋರಲಾಗಿದೆ.

ಸದರಿ ಜಿಲ್ಲಾ ಮಟ್ಟದ ಜಂಟಿ ಸಲಹಾ ಸಮಿತಿಯು ಬೆಳಗಾವಿ ಕ್ಯಾಂಟೋನ್‌ಮೆಂಟ್ ಬೋರ್ಡನ ಒಟ್ಟು 1763.78 ಎಕರೆ ಜಾಗೆಯ ವಿವಿಧ ಅಂಶಗಳನ್ನು ಒಳಗೊಂಡಂತೆ ಸಂಪೂರ್ಣ ಸಮೀಕ್ಷೆ ಕೈಗೊಂಡು 15 ದಿನಗಳೊಳಗಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿರುತ್ತಾರೆ.  

ಎ-1 ವರ್ಗದ ಜಾಗ 929.19 ಎಕರೆ ಜಾಗ ಎಲ್.ಎಂ.ಎ. ಲೋಕಲ್ ಮಿಲ್ಟರಿ ಅಥೋರಿಟಿ (ಐಒಂ)  ಅವರ  ನಿರ್ವಹಣೆಗೊಳಪಟ್ಟಿರುತ್ತದೆ. ಉಳಿದ ಜಾಗೆಯ ಸರ್ವೇ ನಂಬರವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ ಮೊಹಮ್ಮದ್ ರೋಷನ್ ತಿಳಿಸಿದರು.

ಅದೇ ರೀತಿಯಲ್ಲಿ ಎ-2 ವರ್ಗದ ಜಾಗ 37.94 ಎಕರೆ ಮಿಲ್ಟರಿ ಮೀಸಲು ಪ್ರದೇಶ ಡಿ.ಇ.ಓ. ಡಿಫೇನ್ಸ್ ಎಸ್ಟೇಟ್ ಆಫೀಸರ್, ಬೆಂಗಳೂರು ಇವರ ನಿರ್ವಹಣೆಗೊಳಪಟ್ಟಿರುತ್ತದೆ. ಸದರಿ ಜಾಗೆಯ ಪೈಕಿ 0.83 ಎಕರೆ ಜಾಗೆಯನ್ನು ಪಾಲಿಕೆಗೆ ಹಸ್ತಾಂತರಿಸಲು ಕರಡು ಪ್ರಸ್ತಾವನೆ ತಯಾರಿಸಲಾಗಿದ್ದು, ಉಳಿದ ಜಾಗೆಯ ಸರ್ವೇ ನಂಬರವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ ತಿಳಿಸಿದರು.

ಬಿ-1 ವರ್ಗದ ಜಾಗ 43.78 ಎಕರೆ ಇದ್ದು, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಭೂಮಿಯಾಗಿರುತ್ತದೆ. ಸದರಿ ಭೂಮಿಯ ಸರ್ವೇ ನಂಬರವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿಯಲ್ಲಿ ಸ್ಪಷ್ಟಪಡಿಸಬೇಕು.

ಬಿ-2 ವರ್ಗದ ಜಾಗ 84.60 ಎಕರೆ ರಾಜ್ಯ ಸರ್ಕಾರದ ಆಡಳಿತ/ನಿರ್ವಹಣೆಗೆ ಒಳಪಟ್ಟಿದ್ದು, ಸದರಿ ಜಾಗೆಯ ಪೈಕಿ 53.29 ಎಕರೆ ಜಾಗೆಯನ್ನು ಪಾಲಿಕೆಗೆ ಹಸ್ತಾಂತರಿಸಲು ಕರಡು ಪ್ರಸ್ತಾವನೆ ತಯಾರಿಸಲಾಗಿರುತ್ತದೆ.

ಬಿ-3 ವರ್ಗದ ಜಾಗ 319.97 ಎಕರೆ ಸದರಿ ಜಾಗೆಯು ಡಿ.ಇ.ಓ. ಡಿಫೇನ್ಸ್ ಎಸ್ಟೇಟ್ ಆಫೀಸರ್, ಬೆಂಗಳೂರು ಇವರ ನಿರ್ವಹಣೆಗೆ ಒಳಪಟ್ಟಿರುತ್ತದೆ.  ಸದರಿ ಜಾಗೆಯ ಪೈಕಿ 28.43 ಎಕರೆ ಜಾಗೆಯನ್ನು ಕೂಡ ಪಾಲಿಕೆಗೆ ಹಸ್ತಾಂತರಿಸಲು ಕರಡು ಪ್ರಸ್ತಾವನೆ ತಯಾರಿಸಲಾಗಿರುತ್ತದೆ. ಉಳಿದ ಜಾಗೆಯ ಸರ್ವೇ ನಂಬರವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡಲು ಸೂಚಿಸಿದರು. 

ಇದೇ ರೀತಿ ಬಿ-4 ವರ್ಗದ 169.52 ಎಕರೆಯ ಭೌತಿಕ ವಸ್ತುಸ್ಥಿತಿ ಮತ್ತು ಜಾಗೆಯನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಮತ್ತು ಕ್ಯಾಂಟೋನ್‌ಮೆಂಟ್ ಬೋರ್ಡನ ಆಡಳಿತ/ನಿರ್ವಹಣೆಗೆ ಒಳಪಟ್ಟಿರುವ 98.28 ಎಕರೆ  ಸಿ-ಲ್ಯಾಂಡ್ ಬಳಕೆಯ ಕುರಿತೂ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳಗಾವಿ ಕ್ಯಾಂಟೋನ್‌ಮೆಂಟ್ ಬೋರ್ಡನ ವ್ಯಾಪ್ತಿಯ ಒಟ್ಟು ಜಾಗೆ 1763.73 ಎಕರೆ ಜಾಗೆಯ ಪೈಕಿ ಕೇವಲ 112.68 ಎಕರೆ ಜಾಗೆಯನ್ನು ಮಾತ್ರ ಹಸ್ತಾಂತರಿಸಲು ಕರಡು ಪ್ರಸ್ತಾವನೆಯನ್ನು ತಯಾರಿಸಲಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸಿವಿಕ್ ಏಮಿನಿಟಿಸ್ ಅಂದರೆ ಪೋಸ್ಟ್ ಆಫೀಸ್, ಬ್ಯಾಂಕ್, ಬಸ್ ಸ್ಟ್ಯಾಂಡ್, ಪಡಿತರ ಅಂಗಡಿಗಳು, ರೀಕ್ರಿಯೇಷನ್ ಸೆಂಟರ್, ಧಾರ್ಮಿಕ-ಶೈಕ್ಷಣಿಕ ಕೇಂದ್ರಗಳು ಹೀಗೆ ಹಲವಾರು ರೀತಿಯ ಪ್ರದೇಶಗಳಿದ್ದು, ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.

ಒಟ್ಟಾರೆಯಾಗಿ ಕ್ಯಾಂಟೋನ್‌ಮೆಂಟ್ ಪ್ರದೇಶದ ಒಟ್ಟು 1763.78 ಎಕರೆ ಜಾಗೆಯ ಸರ್ವೇ ಕಾರ್ಯವನ್ನು 15 ದಿನಗಳೊಳಗಾಗಿ ವರದಿ ಸಲ್ಲಿಸಲ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವದು ನಿರ್ದೇಶನ ನೀಡಿರುತ್ತಾರೆ.

ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ‌ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ  ನಗರ ಯೋಜನಾ ನಿರ್ದೇಶಕರು, ಪಾಲಿಕೆಯ ಉಪ ಆಯುಕ್ತರು (ಕಂದಾಯ), ಉಪ ಆಯುಕ್ತರು (ಅಭಿವೃದ್ಧಿ), ಮಹಾನಗರ ಪಾಲಿಕೆ, ಕಾನೂನು ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button