https://youtube.com/shorts/t3HKLdm_3G4?feature=share
ಎಂಇಎಸ್ ಪುಂಡರ ಮೇಲೆ ಮಸಿ ಚೆಲ್ಲಿ ಪ್ರತಿಭಟಿಸಿದ ಕನ್ನಡಪರ ಕಾರ್ಯಕರ್ತರು; ನಾಳೆ ಬೆಳಗಾವಿ ಬಂದ್ ನಡೆಸುವ ಬೆದರಿಕೆ ಹಾಕಿದ ನಾಡದ್ರೋಹಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಸೋಮವಾರ ಆರಂಭವಾಗಿರುವ ವಿಧಾನಮಂಡಳದ ಅಧಿವೇಶನ ವಿರೋಧಿಸಿ ಮಹಾಮೇಳಾವ ನಡೆಸಲು ಮುಂದಾಗಿದ್ದ ಮಹಾರಾಷ್ಟ್ರ ಏಕಾಕರಣ ಸಮಿತಿ ಪುಂಡರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಮಂಡಳ ಅಧಿವೇಶನ ವಿರೋಧಿಸಿ ಎಂಇ ಎಸ್ ಕಾರ್ಯಕರ್ತರು ಪ್ರತಿಬಾರಿ ಪುಂಡಾಟಿಕೆ ನಡೆಸುವ ರೂಢಿ ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯೂ ಪ್ರತಿಭಟನೆ ಸಮಾವೇಶ ಮಹಾಮೇಳಾವಕ್ಕೆ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಆದರೆ ಮಹಾನಗರ ಪಾಲಿಕೆಯವರು ಪೊಲೀಸ್ ಭದ್ರತೆಯೊಂದಿಗೆ ವೇದಿಕೆ ತೆರವುಗೊಳಿಸಿತು.
ನಗರದ ವ್ಯಾಕ್ಸಿನ್ ಡಿಪೊ ಬಳಿ ಮಹಾ ಮೇಳಾವ ಆಯೋಜಿಸಲು ಸಿದ್ಧತೆ ನಡೆಸಿದ್ದರು. ಭಾನುವಾರವೇ ಭೂಮಿಪೂಜೆ ನಡೆಸಿ ವೇದಿಕೆ ನಿರ್ಮಿಸಿದ್ದರು.ಸೋಮವಾರ ಬೆಳಗ್ಗೆ ಪೊಲೀಸರು ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ವೇದಿಕೆಯನ್ನು ತೆರವುಗೊಳಿಸಿದ್ದಾರೆ.
ಬೆಳಗಾವಿ ಪಾಲಿಕೆಯವರು ವೇದಿಕೆ ತೆರವುಗೊಳಿಸಲು ಮುಂದಾದರೂ ಎಂಇಎಸ್ ಪುಂಡರು ವೇದಿಕೆಯಿಂದ ಕೆಳಗಳಿಯಲು ಒಪ್ಪಿಲ್ಲ. ಕುರ್ಚಿ ಇಲ್ಲದೇ ವೇದಿಕೆಯ ಮೇಲೆ ಕುಳಿತು ಘೋಷಣೆ ಕೂಗಿದರು. ಈ ವೇಳೆ ಎಂಇಎಸ್ ನವರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಈ ವೇಳೆ ಎಂಇಎಸ್ ನ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ ದಳವಿ, ಶುಭಂ ಶೇಳಕೆ ಮತ್ತಿತರು ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೋಲೀಸರು ಮೇಳಾವದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದ ಎಂಇಎಸ್ ಪುಂಡರನ್ನು ಬಲವಂತಾಗಿ ಕೆಳಗಿಳಿಸಿ ವೇದಿಕೆ ತೆರವುಗೊಳಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಎಂಇಎಸ್ ಮುಖಂಡ ದೀಪಕ್ ದಳವಿ, ಮನೋಹರ ಕಿಣೇಕರ್ ಮೇಲೆ ಮಸಿ ಚೆಲ್ಲಿದರು. ಸ್ಥಳದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿದೆ.
ಮಸಿ ಎರಚಿದ ಕನ್ನಡ ಸಂಘಟನೆಯ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿರೋಧಿಸಿ ನಾಳೆ ಬೆಳಗಾವಿ ಬಂದ್ ನಡೆಸುವುದಾಗಿ ಎಂಇಎಸ್ ಮುಖಂಡರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ