*ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲ: ಬೊಮ್ಮಾಯಿ ಕಿಡಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೆಣ್ಣು ಮಕ್ಕಳ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದೆ. ಬಹಳಷ್ಟು ಕುಟುಂಬಗಳು ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಇದ್ದರೂ ಕೂಡ ಸರ್ಕಾರ ಕಾನೂನಿನ ಪ್ರಯೋಗ ಮಾಡುತ್ತಿಲ್ಲ. ಯಾರಿಗೂ ಭಯ ಇಲ್ಲ. ವಸೂಲಿಗೆ ರೌಡಿಗಳನ್ನು ಬಿಟ್ಟಿದ್ದಾರೆ. ಸರ್ಕಾರ ಒಂದು ಕಡೆ ಮಹಿಳೆಯರಿಗೆ ಕಾರ್ಯಕ್ರಮ ಮಾಡುತ್ತೇನೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವಂತಹ ಮೈಕ್ರೊ ಫೈನಾನ್ಸ್ ನಿಯಂತ್ರಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಹಿಂದೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚು ಬಡ್ಡಿ ವಸೂಲಿ ಮಾಡುವವರ ನಿಯಂತ್ರಣಕ್ಕೆ ಕಾನೂನು ತಂದಿದ್ದರು. ಅದು ಕೋರ್ಟ್ ನಲ್ಲಿ ಸ್ಟೇ ಆಗಿದೆ. ಈ ಸರ್ಕಾರ ಕೂಡಲೇ ಅದನ್ನು ತೆರವುಗೊಳಿಸಿ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಪಡೆದು, ಮೈಕ್ರೊ ಫೈನಾನ್ಸ್ ಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ