Kannada NewsKarnataka NewsPolitics

ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳಿಗೆ ವೇಗ ನೀಡಲು ಸಚಿವ ಜಮೀರ್ ಅಹಮದ್ ಖಾನ್ ಸೂಚನೆ 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಕೈಗೊಂಡಿರುವ ವಸತಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನಗರ ಅವಾಸ್ ಯೋಜನೆಯಡಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಕಾಮಗಾರಿ ಗೆ ವೇಗ ನೀಡಬೇಕು ಎಂದು ನಿರ್ದೇಶನ ನೀಡಿದರು.

Home add -Advt

ರಾಜ್ಯದಲ್ಲಿ ಈ ಯೋಜನೆಯಡಿ ಚಾಲ್ತಿಯಲ್ಲಿರುವ 52 ಸಾವಿರ ಮನೆಗಳ ಪೈಕಿ 11400 ಮನೆ ಆದಷ್ಟು ಶೀಘ್ರ ಹಂಚಿಕೆ ಮಾಡಬೇಕಿದ್ದು, ವಸತಿ ಸಮುಚ್ಚಯ ಹಾಗೂ ಮೂಲ ಸೌಕರ್ಯ ಕಾಮಗಾರಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ಎಂದು ಹೇಳಿದರು.

ಬಸವ, ಅಂಬೇಡ್ಕರ್, ದೇವರಾಜ ಅರಸು, ವಾಜಪೇಯಿ ನಗರ ಹಾಗೂ ಪ್ರಧಾನ ಮಂತ್ರಿ ಅವಾಸ್ ಗ್ರಾಮೀಣ ಮನೆಗಳ ವಿಚಾರದಲ್ಲಿ ಫಲಾನುಭವಿಗಳ ಆಯ್ಕೆ ವಿಳಂಬದ ಬಗ್ಗೆ ದೂರುಗಳಿದ್ದು, ಶಾಸಕರ ಜತೆ ಪತ್ರ ವ್ಯವಹಾರ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ಸಬ್ಸಿಡಿ ಮೊತ್ತ ಸಕಾಲಕ್ಕೆ ತಲುಪುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ರೂಪಿಸಿರುವ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಿ, ಫಲಾನುಭವಿಗಳು ವರ್ಷಗಳಿಂದ ಕಾಯುತ್ತಿದ್ದು ಶೀಘ್ರ ಹಂಚಿಕೆಗೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನಗರ ಮತ್ತು ಗ್ರಾಮೀಣ ಅವಾಸ್ ಯೋಜನೆಯಡಿಯಲ್ಲಿ  ಕೇಂದ್ರ ಸರ್ಕಾರದ ಪಾಲುದಾರಿಕೆ ಇರುವುದರಿಂದ ಹೆಚ್ಚಿನ ಅನುದಾನ ಪಡೆಯಲು ಸದ್ಯದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.

ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ, ಪ್ರಧಾನ ಅಭಿಯಂತರ ಸಂಜೀವ ರೆಡ್ಡಿ, ಪರಶುರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button