ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸನ್ಮಾನ ಸ್ವೀಕರಿಸಿ ಕುಶಲೋಪರಿ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲೂಕಿನ ಕರಿಕಟ್ಟಿ ಬಳಿಯಿರುವ ತಮ್ಮ ಒಡೆತನದ ಹರ್ಷ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಮಿಕರ ಕುಶಲೋಪರಿ ವಿಚಾರಿಸಿ, ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿದರು.
ಹರ್ಷ ಸಕ್ಕರೆ ಕಾರ್ಖಾನೆಯ ಸಲುವಾಗಿ ಕಾರ್ಮಿಕರ ಶ್ರಮವನ್ನು ಪರಿಗಣಿಸಿ, ಅವರ ಕಷ್ಟ ಸುಖಗಳನ್ನು ಆಲಿಸಿದ ಅವರು, “ಈ ಸಕ್ಕರೆ ಕಾರ್ಖಾನೆಯನ್ನು ನಾನು ಲಾಭದ ಸಲುವಾಗಿ ಕಟ್ಟಿಲ್ಲ. ಬದಲಾಗಿ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಳ್ಳಲು ನಿರ್ಮಿಸಿದ್ದೇನೆ. ಕಾರ್ಮಿಕರು ಈ ದೇಶದ ಬೆನ್ನೆಲುಬು, ಕಾರ್ಮಿಕರಿಂದಲೇ ನಾವು ಎನ್ನುವ ಉದ್ದೇಶದಿಂದ ಕಾರ್ಮಿಕರಿಗೆ ಬೇಕಾಗಿರುವ ಎಲ್ಲ ಸೌಕರ್ಯಗಳನ್ನು ಸಹ ಮಾಡಿಕೊಟ್ಟಿದ್ದೇನೆ” ಎಂದರು.
ಕಾರ್ಖಾನೆಯ ಆಡಳಿತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಕಾರ್ಖಾನೆಯಲ್ಲಿರುವ ಎಥೆನಾಲ್ ಘಟಕ, ಸ್ಪಿರಿಟ್ ಘಟಕ ಹಾಗೂ ಶುಗರ್ ಮಿಲ್ ಮುಂತಾದ ಸ್ಥಳಗಳನ್ನು ಅವರು ಪರಿಶೀಲಿಸಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಹರ್ಷ ಶುಗರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ಪ್ರಧಾನ ವ್ಯವಸ್ಥಾಪಕ ಸದಾಶಿವ ತೋರಾಥ್, ಎನ್.ಎಂ. ಪಾಟೀಲ, ಮುಖ್ಯ ಆಡಳಿತ ಅಧಿಕಾರಿ ಉಮಾಕಾಂತ ಚೌಕಿಮಠ, ಆಯಾ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು, ಕಾರ್ಮಿಕರು, ಸುತ್ತಮುತ್ತಲಿನ ಹಿರಿಯ ರೈತರು, ಮಹಾಂತೇಶ ಮತ್ತಿಕೊಪ್ಪ, ಅಡಿವೇಶ ಇಟಗಿ ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ