Uncategorized

ಬೆಂಗಳೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿರುವುದನ್ನು ವಿರೋಧಿಸಿ ನಾನಾ ಸಂಘಟನೆಗಳು ನೀಡಿದ ಬೆಂಗಳೂರು ಬಂದ್ ಗೆ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿಲಿಕಾನ್ ಸಿಟಿ ಭಾಗಶಃ ಬಂದ್ ಆಗಿದ್ದರೆ ಬಿಎಂಟಿಸಿ ಬಸ್, ಆಟೊ ಟ್ಯಾಕ್ಸಿಗಳ ಓಡಾಟ ಸಾಮಾನ್ಯವಾಗಿದೆ. ಸದಾ ಜನ, ವಾಹನಗಳಿಂದ ಗಿಜಿಗುಡುವ ರಸ್ತೆಗಳಲ್ಲಿ ಸಂಚಾರ ಕೊಂಚ ವಿರಳವಾಗಿದೆ. ಕೆಲವೆಡೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ಕನ್ನಡ ಹಾಗೂ ರೈತಪರ ಸಂಘಟನೆಗಳ ಮಧ್ಯದಲ್ಲಿನ ಭಿನ್ನಾಭಿಪ್ರಾಯಗಳು ಬಂದ್ ಕರೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಕೆಲ ಸಂಘಟನೆಯವರು ಸೆ.29ರಂದು ಬಂದ್ ಕರೆ ನೀಡಿರುವುದರಿಂದ ಇಂದಿನ ಬಂದ್ ಗೆ ಸಹಕಾರ ನೀಡಿಲ್ಲ.

ಫ್ರೀಡಂ ಪಾರ್ಕ್ ನಲ್ಲಿ ನಾನಾ ಸಂಘಟನೆಯವರು ವಿನೂತನ ರೀತಿಗಳಲ್ಲಿ ಹೋರಾಟ ಕೈಗೊಂಡಿದ್ದು, ರೈತ ಸಂಘಟನೆಗಳ ಸದಸ್ಯರು ಚಾಟಿ ಬೀಸುವ ಮೂಲಕ ಸರಕಾರಕ್ಕೆ ಎಚ್ಚರಿಸಿದರು. ಕನ್ನಡ ಚಲನಚಿತ್ರ ಪೋಷಕ ಕಲಾವಿದರ ಸಂಘದಿಂದಲೂ ಪ್ರತಿಭಟನೆ ನಡೆಸಲಾಯಿತು.

ಏತನ್ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್ ಇಂದಿನ ಬಂದ್ ಗೆ ಬೆಂಬಲ ಸೂಚಿಸಿವೆ. ನಗರಾದ್ಯಂತ ಪೊಲೀಸ್ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button