ಪರೋಪಕಾರ, ಸಹಕಾರ, ದೇಶಾಭಿಮಾನ, ಧರ್ಮಾಭಿಮಾನದಂತಹ ಅಮೂಲ್ಯ ಗುಣಗಳನ್ನು ಹೊಂದಿದ ಸಂಸದ ಅಣ್ಣಾಸಾಹೇಬ ಜೊಲ್ಲೆ – ಶ್ರೀಶೈಲ ಜಗದ್ಗುರು
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – “ಆದರ್ಶಮಯ, ಪರೋಪಕಾರಿ, ಸಹಕಾರ, ದೇಶಾಭಿಮಾನ, ಧರ್ಮಾಭಿಮಾನದಂತಹ ಅನೇಕ ಅಮೂಲ್ಯ ಗುಣಗಳನ್ನು ಹೊಂದಿದ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸಾಮಾಜಿಕ ಕಳಕಳಿ ಹೊಂದಿದ್ದು ಗಡಿಭಾಗದ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಅವರ ಜೊಲ್ಲೆ ಗ್ರುಪ್ ಕಾರ್ಯ ಶ್ಲಾಘನೀಯವಾಗಿದೆ” ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಭವನದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡಿದ್ದ ಚಿಕ್ಕೋಡಿ ಹ್ಯಾಸ್ ಟ್ಯಾಲೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಮಹಾತ್ಮರು ಪ್ರಸಂಗ ಬಂದಾಗ ವಜ್ರದಂತೆ ಕಠೋರ, ಪ್ರಸಂಗ ಬಂದರೆ ಹೂವಿನಂತೆ ಮೃದುವಾಗಿರುವರು. ಅದರಂತೆ ಜೊಲ್ಲೆ ದಂಪತಿಗಳು ಸಹ ತಮ್ಮನ್ನು ತಾವು ರೂಢಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ತಾವೂ ಬೆಳೆದು ಗಡಿ ಭಾಗದ ಜನರನ್ನು ಸಹ ಅಭಿವೃಧ್ಧಿಯತ್ತ ಕರೆದುಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನೇತೃತ್ವವಹಿಸಿಕೊಂಡಿದ್ದ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, “ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿಭೆಗಳು ನಮ್ಮ ದೇಶಕ್ಕೆ ಕೀರ್ತಿ ತರುವಂತಾಗಬೇಕೆಂಬ ಹೆಬ್ಬಯಕೆ ನಮ್ಮದ್ದಾಗಿದ್ದು, ಜನರ ಸೇವೆಗೆ ಸದಾ ಸಿಧ್ಧ. ಕೇಂದ್ರ ಸರಕಾರದ ಎಲ್ಲ ಯೋಜನೆಗಳನ್ನು ಜನರ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಜೊಲ್ಲೆ ಗ್ರುಪ್ ವತಿಯಿಂದಲೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿವೆ ಎಂದರು.
ನಿಪ್ಪಾಣಿ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ “ಸ್ಪರ್ಧೆಯಲ್ಲಿ ಗೆಲವು, ಸೋಲು ಮುಖ್ಯವಲ್ಲ. ತಮ್ಮ ಪ್ರತಿಭೆಗಳನ್ನು ತೋರುವುದು ಮುಖ್ಯ. ಗಡಿಭಾಗದ ಪ್ರತಿಭೆಗಳಿಗೆ ಜೊಲ್ಲೆ ಗ್ರುಪ್ ವೇದಿಕೆಗಳನ್ನು ಕಲ್ಪಿಸಿದ್ದು ಮುಂದೆ ನಮ್ಮ ಭಾಗದ ಒಳ್ಳೆಯ ಪ್ರತಿಭೆಗಳು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸೋಣ ಎಂದರು.
ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಸದಲಗಾ ಗೀತಾಶ್ರಮದ ಡಾ ಶ್ರದ್ದಾನಂದ ಸ್ವಾಮೀಜಿ, ಖಡಕಲಾಟದ ಶಿವಬಸವ ಮಹಾಸ್ವಾಮೀಜಿ ಸಾನಿಧ್ಯವಹಿಸಿಕೊಂಡು ಮಾತನಾಡಿದರು.
ವೇದಿಕೆ ಮೇಲೆ ರಾಣೆಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ, ಜ್ಯೋತಿಪ್ರಸಾದ ಜೊಲ್ಲೆ, ಎಸ್.ಎಂ.ಕಲೂತಿ, ಜಯಾನಂದ ಜಾಧವ, ಕಲ್ಲಪ್ಪಾ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಸಂಜಯ ಕವಟಗಿಮಠ, ದುಂಡಪ್ಪಾ ಬೆಂಡವಾಡೆ, ಸತೀಶ ಅಪ್ಪಾಜಿಗೋಳ, ಸಂಜಯ ಪಾಟೀಲ, ಲಕ್ಷ್ಮಣ ಕಬಾಡೆ, ನಾಗೇಶ ಕೀವಡ, ವಿಜಯ ರಾವುತ್, ರಮೇಶ ಪಾಟೀಲ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ