
ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸೇರಿ ನಲ್ವರಿಗೆ ಲೋಕಾಯುಕ್ತ ಬಿಗ್ ರಿಲೀಫ್ ನೀಡಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದುಬಂದಿದೆ.
ಮುಡಾ ಹಗರಣದ ತನಿಖೆ ಮುಕ್ತಾಯಗೊಳಿಸಿರುವ ಲೋಕಾಯುಕ್ತ, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಹಾಗೂ ಜಮೀನು ಮಾಲೀಕ ದೇವಾರಾಜು ವಿರುದ್ಧ ಸಾಕ್ಷಿಗಳ ಕೊರತೆಯಿದೆ ಎಂದಿದೆ. ಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟಿಸ್ ಜಾರಿ ಮಾಡಿರುವ ಲೋಕಾಯುಕ್ತ, ಸಿದ್ದರಾಮಯ್ಯ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಸಾಕ್ಷಿ ಕೊರತೆಯಿದೆ. ಈ ಬಗ್ಗೆ ವಿರೋಧವಿದ್ದರೆ ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.