
ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಪ್ರಕರಣವನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಎಂ.ಎಲ್.ಸಿ ಸಿ.ಟಿ ರವಿ, ಶಾಸಕರಾದ, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ಸುನೀಲ್ ಕುಮಾರ್, ಹರೀಶ್ ಪೂಂಜಾ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದು, ಸಿಎಂ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆದಿದ್ದಾರೆ.

ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರ ಹಗಲು ದರೋಡೆ ಹಾಗೂ ಹಗರಣಗಳಲ್ಲಿ ಮುಳುಗಿದೆ. ಒಂದೆಡೆ ಬೆಲೆಯೇರಿಕೆ ಮತ್ತೊಂದೆಡೆ ವಾಲ್ಮೀಕಿ ನಿಗಮ, ಮುಡಾ ಅಕ್ರಮ ಸೇರಿ ಹಗರಣಗಳಲ್ಲಿ ಮುಳುಗಿ ಲೂಟಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತವರಲ್ಲಿಯೇ ಮುಡಾದಲ್ಲಿ ಬೃಹತ್ ಅಕ್ರಮ ನಡೆದಿರುವುದು ಸಿಎಂ ಗಮನಕ್ಕೆ ಬರದೇ ನಡೆಯಲು ಸಾಧ್ಯವಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿ ನಾಯಕರು ಸಿಎಂ ಮುತ್ತಿಗೆ ಹಾಕಲು ಮುನ್ನುಗ್ಗುತ್ತಿದ್ದಂತೆ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಎಲ್ಲಾ ನಾಯಕರನ್ನು ವಶಕ್ಕೆ ಪಡೆದು ಬಸ್ ಗಳಲ್ಲಿ ತುಂಬಿ ಕರೆದೊಯ್ದರು. ಪ್ರತಿಭಟನೆಗೂ ಅವಕಾಶ ನೀಡದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ