Kannada NewsKarnataka NewsSports

*ಮುದ್ದೆ ಮಹಾಯುದ್ಧ ಸ್ಪರ್ಧೆ: 14 ರಾಗಿ ಮುದ್ದೆ ತಿಂದು ಟಗರು ಗೆದ್ದ ಶಂಭುಗೌಡ*

ಪ್ರಗತಿವಾಹಿನಿ ಸುದ್ದಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ ಮಹಾಯುದ್ಧ ಸ್ಪರ್ಧೆ ಭರ್ಜರಿ ಯಶಸ್ಸು ಕಂಡಿತು.

ಗ್ರಾಮೀಣ ಭಾಗದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ, ನಗರ ಪ್ರದೇಶದ ಜನರಿಗೆ ರಾಗಿ ಮುದ್ದೆಯ ಮಹತ್ವ ಸಾರುವ ಉದ್ದೇಶದಿಂದ ಈ ವಿಶಿಷ್ಟ ಸ್ಪರ್ಧೆ ಆಯೋಜಿಸಲಾಗಿತ್ತು.

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಸುಮಾರು 167 ಸ್ಪರ್ಧಿಗಳು ನಾಟಿ ಕೋಳಿ ಸಾರು ಹಾಗೂ ರಾಗಿ ಮುದ್ದೆ ಸವಿಯುವ ಮೂಲಕ ಬಹುಮಾನಕ್ಕಾಗಿ ಪೈಪೋಟಿ ನಡೆಸಿದರು. ಸ್ಪರ್ಧಿಗಳಿಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

ಪುರುಷರ ವಿಭಾಗದಲ್ಲಿ ಬೆಂಗಳೂರು ನಿವಾಸಿ ಶಂಭುಗೌಡ ಬರೋಬ್ಬರಿ 14 ರಾಗಿ ಮುದ್ದೆ ತಿಂದು ಪ್ರಥಮ ಸ್ಥಾನ ಗಳಿಸುವ ಮೂಲಕ ಟಗರನ್ನು ಬಹುಮಾನವಾಗಿ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನ ಪಡೆದ ಶ್ರವಣಬೆಳಗೊಳದ ಯೋಗೇಶ್ ಒಂದು ಕುರಿ ಗೆದ್ದರೆ, ತೃತೀಯ ಸ್ಥಾನ ಪಡೆದ ಹರೀಶ್ ನಾಲ್ಕು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರು.

ಮಹಿಳಾ ವಿಭಾಗದಲ್ಲಿಯೂ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದರು. 8.5 ರಾಗಿ ಮುದ್ದೆ ತಿಂದು ಸೌಮ್ಯ ಎ. ಪ್ರಥಮ ಸ್ಥಾನ ಗಳಿಸಿ ಫ್ರಿಡ್ಜ್ ಬಹುಮಾನ ಪಡೆದರು. ದ್ವಿತೀಯ ಸ್ಥಾನ ಪಡೆದ ಭಾಗ್ಯಬಾಯಿ ವಾಷಿಂಗ್ ಮೆಷಿನ್ ಗೆದ್ದರೆ, ತೃತೀಯ ಸ್ಥಾನ ಪಡೆದ ಚೈತ್ರ ಟಿವಿಯನ್ನು ಬಹುಮಾನವಾಗಿ ಪಡೆದುಕೊಂಡರು.

ಕಾರ್ಯಕ್ರಮದ ಆಯೋಜಕ ಅನಿಲ್ ರೆಡ್ಡಿ ಮಾತನಾಡಿ, ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಬೆಂಗಳೂರಿನ ಜನರಿಗೆ ವಿಶೇಷ ಖುಷಿ ನೀಡಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನವೆಂಬರ್ ತಿಂಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ನ್ಯೂಸ್ 18 ಮುಖ್ಯ ಸಂಪಾದಕ ಹರಿಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಗ್ರಾಮೀಣ ಸೊಗಡಿನ ರಾಗಿ ಮುದ್ದೆ, ನಾಟಿ ಕೋಳಿ ಸಾರು ಹಾಗೂ ವಿಶಿಷ್ಟ ಬಹುಮಾನಗಳ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಈ ಸ್ಪರ್ಧೆ ಮತ್ತಷ್ಟು ಮೆರುಗು ನೀಡಿತು.

Related Articles

Back to top button