CrimeKannada NewsNational

*ಪೊಲೀಸ್ ಠಾಣೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಯಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ . 

ಜಾರ್ಖಂಡ್‌ನಲ್ಲಿ ಸರೈಕೆಲಾ-ಖರ್ಸಾವನ್ ಜಿಲ್ಲೆಯ ಗಂಹರಿಯಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಅಕ್ಟೋಬರ್ 29ರ ರಾತ್ರಿ ದಂಪತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಈ ವೇಳೆ ಪತಿ ಹಲ್ಲೆ ನಡೆಸುವ ಭೀತಿಯಿಂದ ಮಹಿಳೆ ಮನೆಯಿಂದ ಹೊರಬಂದು ಪಕ್ಕದ ಮನೆಯೊಂದರಿಂದ ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಿದ್ದಳು. ಮಾಹಿತಿ ಪಡೆದ ಪೊಲೀಸರು ಪಿಸಿಆರ್ ವಾಹನದೊಂದಿಗೆ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಗಂಹರಿಯಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.

ರಾತ್ರಿ ಸಮಯವಾಗಿದ್ದರಿಂದ ಮಹಿಳೆಗೆ ವಿಶ್ರಾಂತಿ ಪಡೆಯಲು ಠಾಣೆಯಲ್ಲಿನ ಕೊಠಡಿಯೊಂದರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆಕೆಗೆ ರಕ್ಷಣೆ ನೀಡಬೇಕಿದ್ದ ಪೊಲೀಸ್ ಠಾಣೆಯಲ್ಲೇ ದೌರ್ಜನ್ಯ ನಡೆದಿರುವ ಆರೋಪ ಇದೀಗ ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದೆ. ಠಾಣೆಯಲ್ಲಿ ವೈರ್‌ಲೆಸ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಮಹಿಳೆಯ ದೂರು ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಸರೈಕೆಲಾ ಉಪವಿಭಾಗದ ಪೊಲೀಸ್ ಅಧಿಕಾರಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ತನಿಖಾಧಿಕಾರಿಯ ವರದಿ ಆಧರಿಸಿ ಆರೋಪಿ ಕಾನ್‌ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇನ್ನೊಂದೆಡೆ, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವೈಜ್ಞಾನಿಕ ಪರೀಕ್ಷೆಗಾಗಿ ರಾಂಚಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಠಾಣೆಯಲ್ಲಿನ ಭದ್ರತಾ ವ್ಯವಸ್ಥೆ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಸೇರಿದಂತೆ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಯಲ್ಲೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

Related Articles

Back to top button