
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಪ್ರಕರಣ ಸದ್ಯ ಸಂಚಲನ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮುಡಾದಿಂದ ಅಕ್ರಮ ನಿವೇಶನ ಹಂಚಿಕೆ ಆರೋಪ ಕೇಳಿಬಂದಿದ್ದು, ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ನಡುವೆ ಸಚಿವ ಬೈರತಿ ಸುರೇಶ್, ಮುಡಾದಿಂದ ನಿವೇಶನ ಪಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಬೈರತಿ ಸುರೇಶ್, ಮುಡಾದಿಂದ ಬದಲಿ ನಿವೇಶನ ಪಡೆದವರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೆಸರುಗಳು ಪ್ರಮುಖವಾಗಿವೆ. ಈ ಬಗ್ಗೆಯೂ ತನಿಖೆಯಾಗಲಿದೆ ಇದು ಅಕ್ರಮವೇ ಅಥವಾ ಸಕ್ರಮವೇ ಎಂಬುದು ಗೊತ್ತಾಗಲಿದೆ ಎಂದರು.
ಮುಡಾದಿಂದ ಬದಲಿ ನಿವೇಶನವನ್ನು ಸಂಸ್ಥೆಗಳಿಗೂ ಹಂಚಲಾಗಿದೆ. ಬದಲಿ ಸೈಟ್ ಪಡೆದವರಲ್ಲಿ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಗಂಗರಾಜು, ಸಿ.ಎನ್.ಮಂಜೇಗೌಡ, ಹೆಚ್.ವಿಶ್ವನಾಥ್, ಮಹದೇವಸ್ವಾಮಿ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರ ಹೆಸರಿದೆ ಎಂದು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಮುಡಾ ಬದಲಿ ನಿವೇಶನ ಪಡೆದವರಲ್ಲಿ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ