Politics

*ಬಿಜೆಪಿ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ: ಡಿ.ಕೆ.ಸುರೇಶ್ ಆಗ್ರಹ*

ಕೀಳುಮಟ್ಟದ ಪದ ಬಳಕೆ: ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಲಿ

ಪ್ರಗತಿವಾಹಿನಿ ಸುದ್ದಿ: “ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸ ಬೇಕು ಹಾಗೂ ವಿಧಾನಸಭಾ ಸ್ಪೀಕರ್ ಅವರು ಶಾಸಕ ಸ್ಥಾನದಿಂದ ವಜಾ ಮಾಡಬೇಕು” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಆಗ್ರಹಿಸಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, “ಮುನಿರತ್ನ ಅವರಂತ ನಾಯಕರು ರಾಜ್ಯದಲ್ಲಿ ಇದ್ದರೆ ಜಾತಿ ಸಂಘರ್ಷಗಳು ಹೆಚ್ಚಾಗುತ್ತವೆ. ಆದ ಕಾರಣಕ್ಕೆ ಇವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಕೇಂದ್ರ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಕೀಳು ಮಟ್ಟದ ಪದ ಬಳಕೆ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಹೇಳಿದರು.

“ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರೇ ಸಮುದಾಯದ ತಾಯಂದಿರನ್ನು ಅವಮಾನಿಸಿದ್ದಾರೆ. ಇದಕ್ಕೆ ನೀವೇ ಉತ್ತರಿಸಬೇಕು. ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಅವರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ಉತ್ತರಿಸಬೇಕು” ಎಂದರು.

ಬಾಯಲ್ಲಿ ರಾಮನ ಜಪ, ಮಹಿಳೆಯರಿಗೆ ಅಪಮಾನ

“ಒಂದು ಕಡೆ ರಾಮನ, ಸಂಸ್ಕೃತಿಯ ಜಪ ಮಾಡುತ್ತ ಇನ್ನೊಂದು ಕಡೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು. ಎಲ್ಲಿ, ಯಾರ ಬಳಿ ಮಾತನಾಡುತ್ತ ಇದ್ದೀನಿ ಎನ್ನುವ ಅರಿವೂ ಅವರಿಗಿಲ್ಲದೇ ಹೆಂಡತಿ, ತಾಯಿಯನ್ನು ಮಂಚಕ್ಕೆ ಕರೆಯುವ ಕೆಟ್ಟ ಪ್ರವೃತ್ತಿ ಕೇಂದ್ರ ಬಿಜೆಪಿ ನಾಯಕರಿಗೆ ಕೇಳಿಸುತ್ತಿಲ್ಲವೇ? ಆರ್ ಎಸ್ ಎಸ್ ನಂಟು ಇಟ್ಟುಕೊಂಡಿರುವ ಇವರ ನಡವಳಿಕೆ ನಾಚಿಕೆ ತರುವಂತಹದ್ದು” ಎಂದರು.

“80 ದಶಕದಲ್ಲಿ ದಲಿತರ ವಿರುದ್ಧ ಬಳಸುತ್ತಿದ್ದ ಪದಗಳನ್ನು ಈಗ ಬಳಸುತ್ತಾ ಇದ್ದಾರೆ. ಇಡೀ ಮಹಿಳಾ ಹಾಗೂ ತಾಯಿ ಕುಲಕ್ಕೆ ಅಪಮಾನ. ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ತೋಚಿದ್ದು ಮಾತನಾಡಿ ಹೋಗುವ ಕೇಂದ್ರ ಬಿಜೆಪಿ ನಾಯಕರು ಇದರ ಬಗ್ಗೆ ಉಸಿರು ಬಿಡಲಿ” ಎಂದರು.

ಕುಮಾರಸ್ವಾಮಿ ಒಕ್ಕಲಿಗರ ಪರ ನಿಂತು ಮುನಿರತ್ನರನ್ನು ವಜಾ ಮಾಡಿಸುತ್ತಾರೆ

ಒಕ್ಕಲಿಗರನ್ನು ಅಪಮಾನ ಮಾಡಲಾಗಿದೆ ಈಗ ಸಮುದಾಯದ ಪರವಾಗಿ ಕುಮಾರಸ್ವಾಮಿ ಅವರು ನಿಲ್ಲುತ್ತಾರ ಎಂದು ಕೇಳಿದಾಗ “ಇದರ ಬಗ್ಗೆ ಕುಮಾರಸ್ವಾಮಿ ಏನೇನು ಹೇಳಿಕೆ ನೀಡುತ್ತಾರೆ ಎಂಬುದನ್ನು ಮಧ್ಯಮದವರು ಗಮನಿಸಿ ನೋಡಿ. ನರೇಂದ್ರ ಮೋದಿ ಅವರಿಗೆ ಹೇಳಿ ಪಕ್ಷದಿಂದ ಮುನಿರತ್ನರನ್ನು ವಜಾ ಮಾಡಿಸುತ್ತಾರೆ. ಕುಮಾರಸ್ವಾಮಿ ಅವರಿಗೆ ಇರುವ ತಾಕತ್ತು ನಿಮಗೆ ಗೊತ್ತಿಲ್ಲ” ಎಂದರು.

ರೇಣುಕಾಸ್ವಾಮಿಗೆ ಆದ ಗತಿ ನಿನಗೆ ಆಗುತ್ತದೆ ಎಂದು ಮುನಿರತ್ನ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ “ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದೀಪಕ್ ಮುನಿರತ್ನ ಸಂಬಂದಿ. ನೂರಕ್ಕೆ ನೂರರಷ್ಟು ಇದಕ್ಕೆ ಇವರ ಸಂಬಂಧ ಇದ್ದೇ ಇರುತ್ತದೆ.ಆಡಿಯೋದಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಹೇಳಿದ್ದಾರೆ. ಅಂದರೆ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ” ಎಂದರು.

ಒಕ್ಕಲಿಗ ಸಮುದಾಯವನ್ನು ಕೀಳಾಗಿ ಕಂಡಿದ್ದಾರೆ

“ಒಕ್ಕಲಿಗ ಸಮುದಾಯವನ್ನು ಕೀಳಾಗಿ ಕಂಡಿದ್ದಾರೇ. ಎರಡು ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಕಾರಣ ಆಗಿದ್ದಾರೆ. ಶುಕ್ರವಾರ ಘಟನೆ ಹೊರಗೆ ಬಂದರೂ ಒಬ್ಬನೇ ಒಬ್ಬ ಬಿಜೆಪಿ ನಾಯಕ ಪ್ರತಿಕ್ರಿಯೆ ಕೊಟ್ಟಿಲ್ಲ. ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಾಗಿತ್ತು. ಇಡೀ ದೇಶವೇ ಬೆಚ್ಚಿ ಬೀಳುವ ಕೀಳು ಪದಗಳನ್ನು ಮುನಿರತ್ನ ಆಡಿದ್ದಾರೆ” ಎಂದರು.

ಮೋದಿ ಅವರ ತಾಯಿ ಬಗ್ಗೆ ಮಾತನಾಡಿದ್ದರು

“ಪ್ರಧಾನಿ ಮೋದಿ, ಅಮಿತ್ ಷಾ, ನಡ್ದಾ ಅವರಿಗೆ ಬಿಜೆಪಿ ಶಾಸಕನ ನುಡಿಮುತ್ತುಗಳ ಬಗ್ಗೆ ವಿವರಣೆ ನೀಡಬೇಕು. ಮೋದಿ ಅವರು ಇದನ್ನು ಸಹಿಸಿಕೊಳ್ಳಬಹುದು. ಏಕೆಂದರೆ ಈ ಹಿಂದೆ ಮೋದಿ ಅವರ ತಾಯಿಯ ಬಗ್ಗೆ ಮಾತನಾಡಿದ್ದನ್ನು ಮನ್ನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ” ಎಂದರು.

ಕೀಳಿನಲ್ಲಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಕೆ

“ನೇರವಾಗಿ ಜಾತಿ ನಿಂದನೆ ಮಾಡಿದ್ದಾರೆ. ಇದನ್ನು ಸ್ಪೀಕರ್ ಅವರು ಹಾಗೂ ರಾಜ್ಯಪಾಲರೂ ಸಹ ಗಮನಿಸಬೇಕು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದವರು ಎಂದೂ ಕೇಳದ ಮಾತುಗಳನ್ನು ಮುನಿರತ್ನ ಅವರು ಸಾರ್ವಜನಿಕವಾಗಿ ಆಡಿದ್ದಾರೆ. ಕೀಳು ಮನಸ್ಥಿತಿಯವರು ಬಳಸಲು ಆಗದ,ಅತ್ಯಂತ ಕೀಳು ಮಟ್ಟಕ್ಕಿಂತ ಕೆಟ್ಟ ಪದಗಳನ್ನು ಮಾಜಿ ಮಂತ್ರಿ ಮುನಿರತ್ನ ಆಡಿದ್ದಾರೆ. ಇವರನ್ನು ಬಿಜೆಪಿಯವರು ಪಕ್ಷದಿಂದ ಉಚ್ಚಾಟಿಸಬೇಕು” ಎಂದರು.

“ಮುನಿರತ್ನ ಅವರನ್ನು ಬಂಧಿಸಲಾಗುತ್ತದೆಯೇ ಎಂದು ಕೇಳಿದಾಗ “ಗೃಹ ಮಂತ್ರಿಗಳು ಇದರ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮುನಿರತ್ನ ಮೇಲೆ ಯಾವ, ಯಾವ ಆರೋಪಗಳಿಗೆ ಅದನ್ನು ಮುಂದಿಟ್ಟುಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕು ಎಂದರೆ ಈ ಕೆಲಸ ಆಗಬೇಕು” ಎಂದು ಹೇಳಿದರು.

“ಒಕ್ಕಲಿಗರ ಮತ ಬೇಕು ಎಂದು ಕಾಲಿಗೆ ಬೀಳುತ್ತಾರೆ. ಈಗ ಒಕ್ಕಲಿಗ ಸಮುದಾಯದ ತಾಯಿಯನ್ನು ಮಂಚಕ್ಕೆ ಬಾ ಎಂದು ಹೀನವಾಗಿ ಮಾತನಾಡುತ್ತಾರೆ. ದಲಿತರ ಮತ ಬೇಕು ಎನ್ನುವಾಗ ಕಾಲಿಗೆ ಬೀಳುವ ಮನುಷ್ಯ ಇಷ್ಟು ಹೀನಾಯವಾಗಿ ಮಾತನಾಡುತ್ತಾನೆ. ಇಂತಹ ಸಮಾಜ ಘಾತುಕ ಶಕ್ತಿಯ ವಿರುದ್ಧ ಏನೇನೋ ಪ್ರಸಾರ ಮಾಡುವ ಮಾಧ್ಯಮಗಳು ಇದನ್ನು ಪ್ರಸಾರ ಮಾಡಬೇಕು” ಎಂದರು.

ಮುನಿರತ್ನ ಅವರ ಮೇಲಿನ ಇತರೇ ಪ್ರಕರಣಗಳ ಬಗ್ಗೆ ಕೇಳಿದಾಗ “ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಸ್ ದಾಖಲಾಗಿದೆ. ಈ ವ್ಯಕ್ತಿ ಗುತ್ತಿಗೆ ಮಾಡುತ್ತಿದ್ದವನು ಜೊತೆಗೆ ಸಿನಿಮಾದವನು. ಅವರು ಹೊಡೆಯುವ ಸಿನಿಮಾ ಡೈಲಾಗ್ ಗಳಿಗೆ ಮಧ್ಯಮದವರು ಸುಮ್ಮನಾಗಿ ಬಿಡುತ್ತಾರೆ” ಎಂದರು.

ಗುತ್ತಿಗೆದಾರ ಧೈರ್ಯ ಮಾಡಿ ಮುಂದೆ ಬಂದಿದ್ದಾನೆ

“ಅಧಿಕಾರಿಗಳನ್ನು ನಿಂದಿಸಿರುವ ಅನೇಕ ಘಟನೆಗಳಿವೆ. ಚೆಲುವರಾಜು ಎನ್ನುವ ಗುತ್ತಿಗೆದಾರ ಧೈರ್ಯ ಮಾಡಿ ಮುಂದೆ ಬಂದಿದ್ದಾನೆ. ಯಾರಾದರೂ ಅಧಿಕಾರಿಗಳು ಮನಸ್ಸು ಮಾಡಿ ಈತನ ವಿರುದ್ಧ ಮುಂದೆ ಬಂದರೆ ಸರ್ಕಾರವೇ ರಕ್ಷಣೆ ಕೊಡಲಿದೆ. ನಾನು ಅವರ ಬೆನ್ನಿಗೆ ನಿಲ್ಲುತ್ತೇನೆ. ಬಿಜೆಪಿಯಲ್ಲಿ ಇರುವ ಸಂಸ್ಕೃತಿ ಇದೇನಾ ಎಂದು ಪ್ರಶ್ನೆ ಮಾಡಬೇಕಾಗಿದೆ. ನೀವು ಮುನಿರತ್ನ ಅವರ ಬೆದರಿಕೆಗಳ ಬಗ್ಗೆ ಅನೇಕ ಅಧಿಕಾರಿಗಳ ಬಳಿ ಮಾತನಾಡಿ ಮಾಹಿತಿ ಪಡೆದುಕೊಳ್ಳಬಹುದು” ಎಂದರು.

ಅಧಿಕಾರಗಳಿಗೆ ಆಗಿರುವ ನೋವನ್ನು ತಿಳಿಸಬಹುದೇ ಎಂದು ಪ್ರಶ್ನೆ ಕೇಳಿದಾಗ “ಮಧ್ಯಮದವರು ಅಧಿಕಾರಿಗಳ ಬಳಿಯೇ ಕೇಳಬೇಕು. ನಾನು ಇದಕ್ಕೆ ಉತ್ತರ ನೀಡಿದರೆ ರಾಜಕೀಯ ಹೇಳಿಕೆಯಾಗಿ ಪರಿವರ್ತನೆಯಾಗುತ್ತದೆ. ಅಧಿಕಾರ ಇರಲಿ ಇಲ್ಲದಿರಲಿ ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಕಾರ್ಯಕರ್ತರು, ನಾಗರೀಕರಿಗೆ ಏನೇ ತೊಂದರೆ ಆದರು ಅವರ ಜೊತೆ ನಿಲ್ಲುತ್ತೇನೆ ಎಂದು ಸೋತ ದಿನದಿಂದ ಹಿಡಿದು ಇಂದಿನ ತನಕ ಹೇಳುತ್ತಿದ್ದೇನೆ. ಅವರ ಸರ್ಕಾರ ಇದ್ದಾಗ ಮುನಿರತ್ನ ಅನೇಕ ಜನರ ಮೇಲೆ ನೂರೆಂಟು ಪ್ರಕರಣಗಳನ್ನು ಹಾಕಿಸುತ್ತಿದ್ದರು” ಎಂದರು.

ನಿಮ್ಮ ಸ್ನೇಹಿತರಾಗಿದ್ದವರು ಈ ರೀತಿ ಮೊದಲು ವರ್ತನೆ ಮಾಡುತ್ತಿದ್ದರೇ ಎಂದು ಕೇಳಿದಾಗ “ನನಗೆ ಈಗಲೂ ಉತ್ತಮ ಸ್ನೇಹಿತರು. ನಮ್ಮ ಜೊತೆ ಇದ್ದಾಗ ಈ ರೀತಿಯ ಮಾತುಗಳನ್ನು ಆಡುತ್ತಾ ಇದ್ದಿದ್ದನ್ನು ನಾನು ನೋಡಿರಲಿಲ್ಲ. ಒಂದಷ್ಟು ಜನರು ಹೇಳುತ್ತಾ ಇದ್ದರು, ಆದರೆ ನಾನು ಕೇಳಿರಲಿಲ್ಲ” ಎಂದರು.

ಬಿಜೆಪಿಗೆ ಮುನಿರತ್ನ ಹೋದ ಮೇಲೆ ಬದಲಾವಣೆಯಾದರೆ ಎಂದು ಕೇಳಿದಾಗ “ಬಿಜೆಪಿಯಲ್ಲಿ ಇರುವ ಸಂಸ್ಕೃತಿ ಇದೆಯೇ ಎಂದು ಪ್ರಶ್ನೆ ಮಾಡಬೇಕಿದೆ” ಎಂದರು.

ಡಿ. ಕೆ. ಸಹೋದರರನ್ನು ನೆನೆಸಿಕೊಳ್ಳದೇ ಏನೂ ಆಗುವುದಿಲ್ಲ

ಡಿ.ಕೆ ಸಹೋದರರ ಹುನ್ನಾರ ಎಂದು ಮುಂದೊಂದು ದಿನ ಕೇಳಿ ಬಂದರೆ ಎನ್ನುವ ಬಗ್ಗೆ ಕೇಳಿದಾಗ “ಡಿ.ಕೆ.ಸಹೋದರರ ಬಗ್ಗೆ ನೆನೆಪು ಮಾಡಿಕೊಳ್ಳದೆ ಇದ್ದರೇ ರಾಜ್ಯದ ಒಂದಷ್ಟು ನಾಯಕರಿಗೆ ಒಂದು, ಎರಡು ಸೇರಿ ಏನೂ ಆಗುವುದಿಲ್ಲ. ಮೂರನೆಯದು ಇಲ್ಲ ಅದಕ್ಕೆ ಅವರಿಗೆ ಅದು ಆಗುವುದಿಲ್ಲ. ಅದು ಏನೆಂದು ಮಾಧ್ಯಮದವರು ಕಂಡುಹಿಡಿಯಿರಿ” ಎಂದರು.

ನಾಗಮಂಗಲ ವಿಚಾರ ಮರೆಸಲು ಮುನಿರತ್ನ ಆಡಿಯೋ ಹೊರಗೆ ಬಂದಿದೆ ಎಂದಾಗ “ಅಲ್ಲಿ ಗಣಪತಿ ಗಲಾಟೆ. ಇಲ್ಲಿ ಜಾತಿ ನಿಂದನೆ, ಪ್ರಾಣ ಬೆದರಿಕೆ. ನಾಗಮಂಗಲಕ್ಕೂ, ಆರ್. ಆರ್. ನಗರಕ್ಕೂ ಏನು ಸಂಬಂಧ” ಎಂದರು.

ಕುಮಾರಸ್ವಾಮಿ ಗಲಾಟೆ ಮಾಡಿಸಿರಬಹುದು

ನಾಗಮಂಗಲ ಗಲಾಟೆ ಕಾಂಗ್ರೆಸ್ ಚಿತಾವಣೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ವಾರಕ್ಕೊಮ್ಮೆ ಬಂದು ಏನೇನೋ ಮಾತನಾಡುವ ಅವರು ಇದಕ್ಕೆ ಕಾರಣ ಇರಬಹುದು ಎಂದು ನಾನೂ ಹೇಳಬಹುದು ಅಲ್ಲವೇ? ಅವರು ಏನು ಆರೋಪ ಮಾಡುತ್ತಾರೋ ಆದೇ ರೀತಿ ನಾನೂ ಆರೋಪ ಮಾಡುತ್ತೇನೆ” ಎಂದರು.

ಕಾಂಗ್ರೆಸ್ ಸರ್ಕಾರ ಅತಿಯಾದ ತುಷ್ಟಿಕರಣ ಮಾಡುತ್ತಿದೆ ಎಂದಾಗ “ನಾವು ಸರ್ವಜನಾಂಗ ಶಾಂತಿಯ ತೋಟ ಎಂದು ಕುವೆಂಪು ಅವರ ಮಾತಿನ ಮೇಲೆ ನಂಬಿಕೆಯಿಟ್ಟು ನಡೆಯುತ್ತಾ ಇದ್ದೀವೆ. ಯಾರ ತುಷ್ಟಿಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಅವರ ತತ್ವದಲ್ಲಿ ನಾವು ನಡೆಯುತ್ತಾ ಇದ್ದೇವೆ” ಎಂದರು.

ರಾಹುಲ್ ಗಾಂಧೀ ಭೇಟಿ ಕಾಕತಾಳೀಯ

ಡಿಸಿಎಂ ಅವರ ಅಮೇರಿಕಾ ಪ್ರವಾಸದ ಬಗ್ಗೆ ಕೇಳಿದಾಗ “ಕುಟುಂಬದ ಜೊತೆ ಪ್ರವಾಸ ತೆರಳಿ ಐದಾರು ವರ್ಷಗಳೇ ಕಳೆದಿದ್ದವು. ಅನೇಕ ಬಾರಿ ಕೋರ್ಟ್ ಯಿಂದ ಅನುಮತಿ ಪಡೆಯಲು ಆಗಿರಲಿಲ್ಲ. ಅಮೇರಿಕಾ ಭೇಟಿ ಬಗ್ಗೆ ಮಾಧ್ಯಮಗಳು ಉಹಾಪೋಹದ ಸುದ್ದಿಗಳನ್ನು ಮಾಡುತ್ತಿವೆ. ರಾಹುಲ್ ಗಾಂಧೀ ಅವರ ಭೇಟಿ ಕಾಕತಾಳೀಯ. ಯಾವುದೇ ರಾಜಕೀಯ ಚರ್ಚೆ ನಡೆಸಬೇಕು ಎಂದರೆ ದೆಹಲಿಗೆ ಹೋಗಬಹುದಲ್ಲವೇ?” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button