ಸ್ವಪಕ್ಷದ ನಾಯಕರ ವಿರುದ್ಧವೂ ಷಡ್ಯಂತ್ರ ನಡೆಸಿದ್ದ ಶಾಸಕ
ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರನಿಗೆ ಜೀವಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಬಿಜೆಪಿಯಿಂದಲೇ ಮುನಿರತ್ನ ಉಚ್ಛಾಟನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೀವ ಬೆದರಿಕೆ, ಜಾತಿ ನಿಂದನೆ, ಮಹಿಳೆಯರ ಬಗ್ಗೆ ಕೀಳು ಮಟ್ಟದ ಪದ ಬಳಕೆಗೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮುನಿರತ್ನ ಪರ ಹಲವು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಇದೀಗ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ, ಹನಿಟ್ರ್ಯಾಪ್ ಪ್ರಕರಣ ದಾಖಲಾಗುತ್ತಿದ್ದಂತೆ ಕಮಲ ನಾಯಕರು ಸೈಲೆಂಟ್ ಆಗಿದ್ದಾರೆ.
ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಕೇಸ್ ದಾಖಲಾಗುತ್ತಿದಂತೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ವಿರುದ್ಧ ಸಿಡಿದೆದ್ದು, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಮುನಿರತ್ನ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು, ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಸ್ವಪಕ್ಷದ ಕೆಲ ನಾಯಕರ ವಿರುದ್ಧವೇ ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ನಡೆಸಲೆತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮುನಿರತ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶಾಸಕ ಮುನಿರತ್ನ ಅವರನ್ನು ಬಿಜೆಪಿಯಿಂದಲೇ ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ