
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಅಪರಾಧಿಯೊಬ್ಬನಿಗೆ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ವಿವಾಹವಾಗಲು ಹೈಕೋರ್ಟ್ ಪೆರೋಲ್ ನೀಡಿದೆ.
ಕೋಲಾರದ ಅಪರಾಧಿಯೊಬ್ಬನಿಗೆ 9 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ವಿವಾಹವಾಗಲು ಮಾನವೀಯತೆ ಆಧಾರದ ಮೇಲೆ ಹೈಕೋರ್ಟ್ 15 ದಿನಗಳ ಕಾಲ ಪೆರೋಲ್ ನೀಡಿದೆ.
ಅಪರಾಧಿಯನ್ನು ಪ್ರೀತಿಸಿದ್ದ 30 ವರ್ಷದ ಯುವತಿ ನೀತಾ, ನಾನು 9 ವರ್ಷಗಳಿಂದ ಅಪರಾಧಿ ಆನಂದ್ ನನ್ನು ಪ್ರೀತಿಸುತ್ತಿದ್ದು, ಈಗ ಮನೆಯವರು ಬೇರೆಯವನ ಜೊತೆ ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಾರೆ ಹಾಗಾಗಿ ಮದುವೆಯಾಗಲು ಪೆರೋಲ್ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಳು. ಇದೇ ವೇಳೆ ಶಿಕ್ಷೆಗೆ ಒಳಗಾಗಿದ್ದ ಯುವಕನ ತಾಯಿ ರತ್ಮಮ್ಮ ಕೂಡ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.
ಅಪರಾಧಿ ಆನಂದ್ ಗೆ 15 ದಿನಗಳ ಕಾಲ ಪೆರೋಲ್ ನೀಡಿ ಬಿಡುಗಡೆ ಮಾಡುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪೆರೋಲ್ ಅವಧಿ ಮುಗಿಯುತ್ತಿದ್ದಂತೆ ತಕ್ಷಣ ಜೈಲಿಗೆ ಬರಬೇಕು ಎಂದು ಕಠಿಣ ಷರತ್ತನ್ನು ವಿಧಿಸಲಾಗಿದೆ.
ಕಾರಾಗೃಹದ ಮುಖ್ಯಸ್ಥರು ಅಸಾಧಾರಾಣ ಸಂದರ್ಭವನ್ನು ಪರಿಗಣಿಸಿ ಅಪರಾಧಿಗೆ ಪೆರೋಲ್ ನಿಡಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ