
ಪ್ರಗತಿವಾಹಿನಿ ಸುದ್ದಿ: ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಮಠದ ಆಸ್ತಿಯನ್ನು ಮಾರಾಟ ಮಾಡಿರುವ ಗಂಭೀರ ಆರೋಪ ಮುರುಘಾಶ್ರೀ ವಿರುದ್ಧ ಕೇಳಿಬಂದಿದೆ.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗಷ್ಟೇ ಪೋಕ್ಸೋ ಪ್ರಕರಣದ ಒಂದು ಕೇಸ್ ನಲ್ಲಿ ಖುಲಾಸೆಗೊಂಡಿದ್ದು, ಎರಡನೇ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಮುರುಘಾ ಶ್ರೀ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ಮುರುಘಾಶ್ರೀ ಮಠದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶ ಉಲ್ಲಂಘನೆ ಮಾಡಿ 2025ರ ಅ.6ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ ಸುಮಾರು 2 ಕೋಟಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವವರಿಗೆ ಸ್ಪೆಷಲ್ ಜಿಪಿಎ ನೀಡಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಭಕ್ತ ಪ್ರಕಾಶ್ ಎಂಬುವವರು ಆರೋಪ ಮಾಡಿ ದೂರು ನೀಡಿದ್ದಾರೆ. ಮಠದ ಆಡಳಿತ ನೋಡಿಕೊಳ್ಳಲು ಸರ್ಕಾರದಿಂದ ಸಮಿತಿ ರಚಿಸಿದ್ದು, ಆದರೆ ಸಮಿತಿ ಗಮನಕ್ಕೆ ತರದೆ ಆಸ್ತಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಸಮಿತಿಗೆ ದೂರು ನೀಡಲಾಗಿದೆ.




