*ಮುರುಸು ಚಂಡಮಾರುತಕ್ಕೆ ಸಿಲುಕಿ ಪಲ್ಟಿಯಾದ ದೋಣಿ*: *ನಾಲ್ವರು ಮೀನುಗಾರರು ದುರ್ಮರಣ*; *ಐವರು ಕಣ್ಮರೆ*

ಪ್ರಗತಿವಾಹಿನಿ ಸುದ್ದಿ: ಮುರುಸು ಚಂಡಮಾರುತ ಆಂಧ್ರಪ್ರದೇಶದ ಹಲವೆಡೆಗಳಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಚಂಡಮಾರುತದ ಅಬ್ಬರಕ್ಕೆ ಕರಾವಳಿಯಲ್ಲಿ ದೋಣಿಯೊಂದು ಪಲ್ಟಿಯಾಗಿದ್ದು, ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ. ಐವರು ಕಣ್ಮರೆಯಾಗಿದ್ದಾರೆ.
ಆಂಧ್ರ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಮೀನುಗಾರರಿದ್ದ ದೋಣಿಯೊಂದು ಚಂಡಮಾರುತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ನಾಲ್ವರು ಮೀನುಗಾರರು ಮೃತಪಟ್ಟಿದ್ದಾರೆ. ಐವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ಐವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು ಒಂಬತ್ತು ಮೀನುಗಾರರು ಈ ದೋಣಿಯಲ್ಲಿದ್ದರು. ಚಂಡಮಾರುತದ ಹಿನ್ನೆಲೆಯಲ್ಲಿ ದೋಣಿ ಸಮುದ್ರದಲ್ಲಿ ಪಲ್ಟಿಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರಕಾಶಂ ಜಿಲ್ಲಾಧಿಕಾರಿ ಪಿ. ರಾಜಾ ಬಾಬು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 29ರಂದು ಮೀನುಗಾರರು ಚೆನ್ನೈನಿಂದ ಸಮುದ್ರಕ್ಕೆ ತೆರಳಿದ್ದರು. ಈ ನಡುವೆ ಚಂಡಮಾರುತ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ದೋಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು. ಅದರಂತೆ ನಾಲ್ಕು ದೋಣಿಗಳನ್ನು ಆಂಧ್ರಪ್ರದೇಶದ ಕರಾವಳಿಯಲ್ಲಿ ಲಂಗರು ಹಾಕಲಾಗಿತ್ತು. ಮೂರು ದೋಣಿಗಳನ್ನು ರಾಮಯಪಟ್ಟಣಂ ಬಂದರಿನಲ್ಲಿ ಹಾಗೂ ಮತ್ತೊಂದು ದೋಣಿಯನ್ನು ನಿಜಾಂಪಟ್ಟಣಂ ಬಂದರಿನಲ್ಲಿ ನಿಲ್ಲಿಸಲಾಗಿತ್ತು.
ನಾಪತ್ತೆಯಾಗಿದ್ದ ಮೀನುಗಾರರ ಪೈಕಿ ಮೂವರ ಮೃತದೇಹಗಳು ಕೊತಪಟ್ಟಣಂ ಕರಾವಳಿಯಲ್ಲಿ ಪತ್ತೆಯಾಗಿವೆ. ಮತ್ತೊಬ್ಬರ ಮೃತದೇಹವನ್ನು ಶೋಧ ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ. ನಾಲ್ವರ ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿ, ಶವಾಗಾರದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.



