Kannada NewsKarnataka NewsLatest

*ಕಾಡುಗೊಂಡನಹಳ್ಳಿ ಹೆಸರಿನ ಬದಲಾವಣೆಗೆ ಮನವಿ*: *ಜಮೀರ್ ಪ್ರಸ್ತಾಪಕ್ಕೆ ಕನ್ನಡಪರ ಸಂಘಟನೆಗಳ ವಿರೋಧ*

ಪ್ರಗತಿವಾಹಿನಿ ಸುದ್ದಿ: ನಮ್ಮ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸುವ ವಿಚಾರ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂಬ ಮನವಿ ಸಲ್ಲಿಕೆಯಾಗಿದೆ. ಆದರೆ, ಈ ಪ್ರಸ್ತಾಪಕ್ಕೆ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಸಚಿವ ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕುರಿತು ಮನವಿ ಮಾಡಿದ್ದಾರೆ. ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ದೃಷ್ಟಿಯಿಂದ ಅರೇಬಿಕ್ ಕಾಲೇಜು ಹೆಸರನ್ನು ಪರಿಗಣಿಸಬೇಕು ಎಂದು ಜಮೀರ್ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕನ್ನಡಪರ ಸಂಘಟನೆಗಳು, ಕಾಡುಗೊಂಡನಹಳ್ಳಿ ಹೆಸರನ್ನೇ ಉಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಒಂದು ವೇಳೆ ಹೆಸರನ್ನು ಬದಲಾಯಿಸುವ ಪ್ರಸ್ತಾಪವಿದ್ದರೆ, ಕನ್ನಡ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ರಂಜಾನ್ ಸಾಬ್ ಅವರ ಹೆಸರನ್ನು ಇಡಬಹುದು ಎಂದು ಸಲಹೆ ನೀಡಿವೆ.

ಇನ್ನು, ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ಬಳಿಕ ಪಿಂಕ್ ಲೈನ್ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಒಟ್ಟಿನಲ್ಲಿ, ಪಿಂಕ್ ಲೈನ್ ಉದ್ಘಾಟನೆಗೂ ಮುನ್ನ ಕಾಡುಗೊಂಡನಹಳ್ಳಿ ನಿಲ್ದಾಣದ ಹೆಸರಿನ ವಿಚಾರ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಮನವಿಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Back to top button