CrimeKannada NewsKarnataka NewsLatest

*ಬಾಳೆಕುದ್ರು ಮಠದ ವಿಗ್ರಹಗಳೇ ಮಾಯ*:*ಮಾರಾಟ ಆರೋಪದ ಬೆನ್ನಲ್ಲೇ ಸ್ವಾಮೀಜಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಶತಮಾನಗಳ ಇತಿಹಾಸವಿರುವ ಮಠದ ಪುರಾತನ ವಿಗ್ರಹಗಳೇ ನಾಪತ್ತೆಯಾಗಿವೆ. ಈ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಮಠದ ಮಠಾಧೀಶರ ಹೆಸರೂ ಕೇಳಿಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆಯಾಗಿದ್ದಾರೆ.

ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಈ ಆರೋಪ ಕೇಳಿಬಂದಿದೆ. ನರಸಿಂಹದೇವರು, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಆರು ಪುರಾತನ ವಿಗ್ರಹಗಳು ಮಠದಿಂದ ನಾಪತ್ತೆಯಾಗಿವೆ. ಈ ಬಗ್ಗೆ ಶಿಷ್ಯರು ಪ್ರಶ್ನಿಸಿದಾಗ, ಹಳೆಯ ವಿಗ್ರಹಗಳನ್ನು ವಿಸರ್ಜಿಸಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದರು ಎನ್ನಲಾಗಿದೆ. ಆದರೆ, ವಿಗ್ರಹಗಳನ್ನು ಮಾರಾಟ ಮಾಡಿರುವ ಆರೋಪ ಈಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮಠದ ಶಿಷ್ಯ ಜಗದೀಶ್ ಐತಾಳ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾಗಿದ್ದ ವಿಗ್ರಹಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದವು. ಮಾರಾಟದ ಉದ್ದೇಶದಿಂದ ವೆಬ್‌ಸೈಟ್‌ನಲ್ಲಿ ಈ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು ಎಂಬ ಮಾಹಿತಿ ತಿಳಿದ ಬಳಿಕ ಐತಾಳ್ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಸುಳಿವು ಆಧರಿಸಿ ತನಿಖೆ ನಡೆಸಿದಾಗ ವಿಗ್ರಹಗಳ ಮಾರಾಟದ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರಸಿದ್ಧ ‘ಐಡಲ್ಸ್’ ಸಂಸ್ಥೆಗೆ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಸಂಸ್ಥೆಯ ಮಾಲೀಕ ನಾಗೇಂದ್ರ ಪ್ರಸಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಕುರಿತು ಮಾಹಿತಿ ಲಭ್ಯವಾಗಿದೆ. ಅನಿಲ್ ಕುಮಾರ್, ಜಯಲಕ್ಷ್ಮಿ ಮತ್ತು ಶ್ರೇಯಸ್ ಕೂಡ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.

ಇನ್ನು, ಭಾಗವತ ಸಂಪ್ರದಾಯಕ್ಕೆ ಸೇರಿದ ಈ ಮಠಕ್ಕೆ ಶತಮಾನಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮಠದ ಆಡಳಿತ ಮತ್ತು ಶಿಷ್ಯ ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿತ್ತು ಎನ್ನಲಾಗಿದೆ. ಇತ್ತೀಚಿನ ಒಂದೆರಡು ತಿಂಗಳಲ್ಲಿ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿತ್ತು. ಶೃಂಗೇರಿ ಶ್ರೀಗಳ ಬಗ್ಗೆ ಬಾಳೆಕುದ್ರು ಸ್ವಾಮೀಜಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಪುರಾತನ ವಿಗ್ರಹಗಳ ಮಾರಾಟ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸ್ವಾಮೀಜಿ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button