Karnataka News

*21ರಂದು ಗಜಪಯಣ: ಅಭಿಮನ್ಯು ಸೇರಿ 14 ಆನೆಗಳು ಭಾಗಿ*

ಪ್ರಥಮ ಹಂತದಲ್ಲಿ 9, 2ನೇ ಹಂತದಲ್ಲಿ 5 ಆನೆಗಳು ಕಾಡಿನಿಂದ ನಾಡಿಗೆ

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿದರು.


ವಿಶ್ವ ಆನೆ ದಿನದ ಸಂದರ್ಭದಲ್ಲಿ ಗಾಂಧಿಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ 2024ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಚಿತ್ರ ಹಾಗೂ ಪಟ್ಟಿಯನ್ನು ಬಿಡುಗಡೆ ಮಾಡಿದರು.

Home add -Advt


ಈ ಬಾರಿಯೂ ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದು, ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ, ಏಕಲವ್ಯ ಕಂಜನ್, ಲಕ್ಷ್ಮೀ, ವರಲಕ್ಷ್ಮೀ ಮತ್ತು ದೊಡ್ಡ ಹರವೇ ಲಕ್ಷ್ಮೀ ಆನೆಗಳು ಪಾಲ್ಗೊಳ್ಳಲಿವೆ.


ಸಂಪ್ರದಾಯದಂತೆ ಮೈಸೂರು ಜಿಲ್ಲಾಡಳಿತದ ಸಹಯೋಗದಲ್ಲಿ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ, ಮಾವುತರು ಮತ್ತು ಕಾವಾಡಿಗರಿಗೆ ಸತ್ಕರಿಸಿ ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸುವ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ 9 ಆನೆಗಳು ಹಾಗೂ ಎರಡನೇ ಹಂತದಲ್ಲಿ 5 ಆನೆಗಳು ನಾಡಿಗೆ ಬರಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಮಿಳುನಾಡು ಅರಣ್ಯ ಸಚಿವ ಎಂ. ಮಥಿವೆಂಥನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ವನ್ಯ ಮೃಗ ವಿಭಾಗದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮತ್ತಿತರರು ಪಾಲ್ಗೊಂಡಿದ್ದರು.

Related Articles

Back to top button