
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರಾಮಾಯಣಗಳು ಬರುತ್ತಿವೆ. ಇದರಿಂದ ಗೊಂದಲ ಮೂಡುತ್ತಿರುವುದರಿಂದ ಮೂಲ ವಾಲ್ಮೀಕಿ ರಾಮಾಯಣ ಹಾಗೂ ನಂತರ ಬಂದ ರಾಮಾಯಣಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ (ಅ.13) ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಯ, ಮಾನವೀಯತೆ ಇಲ್ಲದ ಧರ್ಮ ನಮ್ಮದಾಗುವುದು ಸಾಧ್ಯವಿಲ್ಲ; ಮಾನವೀಯತೆಯೇ ನಮ್ಮ ಧರ್ಮವಾಗಬೇಕು ಎಂದರು.
ದೇವರುಗಳಲ್ಲೂ ತಾರತಮ್ಯ ಮಾಡಲಾಗುತ್ತಿದ್ದು, ಕೆಲವು ಉಗ್ರ ದೇವರುಗಳು; ಇನ್ನುಳಿದವು ಶಾಂತ ದೇವರುಗಳಿದ್ದು, ಶಾಂತ ದೇವರುಗಳು ಬೆಳ್ಳಿ-ಬಂಗಾರ ಮಾತ್ರ ಬೇಡುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.
ಆಹಾರ ಪದ್ಧತಿ, ವ್ಯಕ್ತಿಯ ಬಣ್ಣ-ರೂಪಗಳ ಮೇಲೆ ತಾರತಮ್ಯ ನಡೆಯುತ್ತಿದ್ದು, ಈ ಬಗ್ಗೆ ಸಮಾಜದ ಜನರು ಜಾಗೃತರಾಗಬೇಕಿದೆ.
ವಾಲ್ಮೀಕಿ ಸಮಾಜಕ್ಕೆ ಉದ್ಯೋಗ-ಶಿಕ್ಷಣದಲ್ಲಿ ಶೇ.7.5 ರಷ್ಟು ಮೀಸಲಾತಿ ಅಗತ್ಯವಾಗಿದೆ. ಇದನ್ನು ಪಡೆಯುವ ನಿಟ್ಟಿನಲ್ಲಿ ವಾಲ್ಮೀಕಿ ಗುರುಪೀಠದ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಶಿಕ್ಷಣ, ಸಂಘಟನೆ, ಹೋರಾಟ ಎಂದು ಡಾ.ಅಂಬೇಡ್ಕರ್ ಹೇಳಿದರು. ಅದಕ್ಕೆ ಈಗ ‘ಉದ್ಯೋಗ’ ಎಂಬ ಪದವನ್ನೂ ಸೇರಿಸಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಮಾಜದಲ್ಲಿ ಶಿಕ್ಷಣ ಪ್ರಮಾಣ ಈಗ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತಹ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕಿದೆ. ತಂತ್ರಜ್ಞಾನದ ಈ ಯುಗದಲ್ಲಿ ಉದ್ಯೋಗಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕಿದೆ.
ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸಿದಾಗ ಜಯಂತಿ ಸಾರ್ಥಕವಾಗುತ್ತದೆ. ಸರ್ಕಾರ ಒಂದು ಹಂತದವರೆಗೆ ಸಹಾಯ-ಸಹಕಾರ ನೀಡುತ್ತದೆ. ನಮ್ಮ ಬದುಕು ರೂಪಿಸುವ ಕೆಲಸ ನಾವು ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಮಾಯಣ-ಮಹಾಭಾರತ ಭಾರತೀಯ ಸಂಸ್ಕೃತಿಯ ಕಣ್ಣುಗಳು:
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಧಾರವಾಡ ಕರ್ನಾಟಕ ಕಾಲೇಜಿನ ಡಾ.ಶರಣು ಮುಷ್ಠಿಗೇರಿ ಅವರು, ಜಗತ್ತಿನ ಮಹಾನ್ ಆದರ್ಶ ಗ್ರಂಥಗಳಾಗಿರುವ ರಾಮಾಯಣ-ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು. ಆದ್ದರಿಂದ ನಾನು ಭಾರತೀಯ ಎಂದು ಹೇಳಿಕೊಳ್ಳಬೇಕಾದರೆ ನಾವು ಈ ಎರಡೂ ಮಹಾನ್ ಗ್ರಂಥಗಳನ್ನು ಓದಲೇಬೇಕು ಎಂದರು.

ವಾಲ್ಮೀಕಿ ಈ ದೇಶದ ಆದರ್ಶ. ಆದ್ದರಿಂದ ಅವರ ಆದರ್ಶಗಳು ಮತ್ತು ಬದುಕು ಇಂದು ಅರಿವಿನ ಮಾರ್ಗಗಳಾಗಿವೆ.
ಒಂದು ವಾಲ್ಮೀಕಿ ರಾಮಾಯಣ ಇಂದು ಅರವತ್ತು ಸಾವಿರ ರಾಮಾಯಣಗಳಾದರೂ ಮೂಲ ಗ್ರಂಥ ವಾಲ್ಮೀಕಿ ರಾಮಾಯಣವೇ ಆಗಿ ಉಳಿದಿರುವುದಕ್ಕೆ ಅದರ ಸತ್ವವೇ ಕಾರಣವಾಗಿದೆ.
ಜಗತ್ತಿನ ಸಂಕಟಕ್ಕೆ ಮಿಡಿಯುವ ಮಹಾನ್ ಕಾವ್ಯ ರಚಿಸಿದ ಕೀರ್ತಿ ವಾಲ್ಮೀಕಿ ಋಷಿಗೆ ಸಲ್ಲುತ್ತದೆ.
ರಾಮಾಯಣ, ಮಹಾಭಾರತ, ಗಾಯತ್ರಿ ಮಂತ್ರ ಸೇರಿದಂತೆ ಮಹಾನ್ ಗ್ರಂಥ, ಮಂತ್ರ ರಚಿಸಿದವರು ತಳ ಸಮುದಾಯದವರು. ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದಕರ.
ನಾನು ಭಾರತೀಯ ಎಂದು ಹೇಳಿಕೊಳ್ಳಬೇಕಾದರೆ ಪ್ರತಿಯೊಬ್ಬರು ಈ ಎರಡೂ ಗ್ರಂಥಗಳನ್ನು ಓದಲೇಬೇಕು ಎಂದರು. ರಾಮಾಯಣ ಆದರ್ಶದ ಪ್ರತೀಕವಾಗಿದೆ.
ಗಂಡ-ಹೆಂಡತಿ, ಅಣ್ಣ-ತಮ್ಮ, ರಾಜ-ಮಹಾರಾಜರು, ಋಷಿಮುನಿಗಳು, ಆಡಳಿತ ವ್ಯವಸ್ಥೆ ಪ್ರತಿಯೊಂದು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟ ಆದರ್ಶ ಕೃತಿ ರಾಮಾಯಣ. ಅಂತಹ ರಾಮಾಯಣ ಜಗತ್ತಿಗೆ ಕೊಟ್ಟ ವಾಲ್ಮೀಕಿ ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ.
ದೇಶಕ್ಕಾಗಿ ತ್ಯಾಗ ಮಾಡಿದ ನಾಯಕ ಜನಾಂಗದವರು ಸಾಹಸ -ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ಹಾಕುದರೆ ಸಾಕು ಈ ಸಮುದಾಯದ ತ್ಯಾಗ, ಹೋರಾಟದ ಗತವೈಭವ ಕಾಣಿಸುತ್ತದೆ ಎಂದರು.
ದೇವರ, ಧರ್ಮ, ವಿಶ್ವಾಸದ ಹೆಸರಿನಲ್ಲಿ ಸಮಾಜವನ್ನು ಯಾಮಾರಿಸುವ ಕೆಲಸ ನಡೆದಿದೆ. ಇದರ ಬಗ್ಗೆ ಜಾಗರೂಕತೆಯಿಂದ ಇರಬೇಕು.

ವಾಲ್ಮೀಕಿಯ ಆದರ್ಶ ರಾಮಾಯಣ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕಿದ್ದು, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸುವ ಮೂಲಕ ಮಹಾನ್ ಗ್ರಂಥ ಮತ್ತು ವಾಲ್ಮೀಕಿಯ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದು ಡಾ.ಶರಣು ಮುಷ್ಠಿಗೇರಿ ಅಭಿಪ್ರಾಯಪಟ್ಟರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಮಹಾನ್ ಗ್ರಂಥ ರಾಮಾಯಣದ ಮೂಲಕ ಜಗತ್ತಿಗೆ ಆದರ್ಶ ರಾಮರಾಜ್ಯದ ಕನಸು ಕಟ್ಟಿಕೊಟ್ಟ ವಾಲ್ಮೀಕಿ ಸದಾ ಸ್ಮರಣಾರ್ಹರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಯು ಆಯಾ ಸಮಾಜದ ನಿಜವಾದ ಪ್ರಗತಿಯಾಗಿದೆ ಎಂದರು.
ಹಿಂಡಾಲ್ಕೊ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ತಾಲೂಕ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ ಕೆ.ಎಚ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಸದಾಶಿವ ಬಡಿಗೇರ, ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ಮಾರುತಿ ಸನದಿ, ಮಾಜಿ ನಗರ ಸೇವಕಿ ಜಯಶ್ರೀ ಮಾಲಗಿ, ಎಪಿಎಂಸಿ ಅಧ್ಯಕ್ಷರಾದ ಆನಂದ ಪಾಟೀಲ, ಮಾಜಿ ಪೌರರಾದ ಬಸಪ್ಪ ಚಿಕ್ಕಲದಿನ್ನಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ್ ಗೋರಲ್, ಸಮಾಜದ ಮುಖಂಡರು, ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಾಲ್ಮೀಕಿ ಭಾವಚಿತ್ರದ ಮೆರವಣಿಗೆ:

ಇದಕ್ಕೂ ಮುಂಚೆ ನಗರದ ಅಶೋಕ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಆರ್.ಟಿ.ಓ. ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ಜಗದೀಶ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಸದಾಶಿವ ಬಡಿಗೇರ ಅವರು ಸ್ವಾಗತಿಸಿದರು. ಮಹಾತೇಶ ಅವರು ವಂದಿಸಿದರು ಹಾಗೂ ಸಂತೋಷ ಪಾಟೀಲ ಅವರು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ