Kannada NewsKarnataka NewsLatestPolitics

*ನೇಕಾರರಿಗೆ ಗುಡ್ ನ್ಯೂಸ್: ಉಚಿತ ವಿದ್ಯುತ್ ಬೇಡಿಕೆ ಮನವಿ ಪರಿಶೀಲನೆ: ಸಚಿವ ಶಿವಾನಂದ ಪಾಟೀಲ ಭರವಸೆ*

ಬೆಳಗಾವಿ: ವಿದ್ಯುತ್ ಮಗ್ಗಗಳಿಗೆ ಹತ್ತು ಅಶ್ವಶಕ್ತಿವರೆಗೆ ನವೆಂಬರ್ 2023ರಿಂದ ಜಾರಿ ಮಾಡಿರುವ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು 2023ರ ಏಪ್ರಿಲ್‍ನಿಂದ ಅನ್ವಯಗೊಳಿಸುವಂತೆ ನೇಕಾರರ ಬೇಡಿಕೆಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹತ್ತು ಅಶ್ವಶಕ್ತಿವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ಆದೇಶ ನವೆಂಬರ್ -2023 ರಿಂದ ಜಾರಿಗೆ ಬಂದಿದ್ದು, ಅಂದಿನಿಂದ ಅನ್ವಯವಾಗುತ್ತಿದೆ. ನೇಕಾರರ ಬೇಡಿಕೆಯಂತೆ ಹತ್ತರಿಂದ ಇಪ್ಪತ್ತು ಅಶ್ವಶಕ್ತಿವರೆಗೆ ಪ್ರತಿ ಯೂನಿಟ್‍ಗೆ ರೂ 1.25 ರಿಯಾಯಿತಿ ದರದಲ್ಲಿ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಗಳಿಂದಾಗಿ ಸರ್ಕಾರಕ್ಕೆ ವಾರ್ಷಿಕ 120 ರಿಂದ 130 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸಚಿವ ಶಿವಾನಂದ ಪಾಟೀಲ ವಿವರಿಸಿದರು.

ಅನೇಕ ನೇಕಾರರು ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರುವವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಕೆಲವರು ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಯಾವುದೇ ಯೋಜನೆ ಸರ್ಕಾರದ ಆದೇಶ ಹೊರಬಿದ್ದ ನಂತರವೇ ಅನ್ವಯವಾಗಲಿದೆ. ಆದರೂ ಆದೇಶ ಹೊರ ಬೀಳುವ ಮುಂಚಿನ ಅವಧಿಗೂ ಅನ್ವಯ ಮಾಡಬೇಕು ಎಂಬ ಶಾಸಕರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸುತ್ತಿದೆ. ಈ ಬೇಡಿಕೆಗೆ ಆರ್ಥಿಕ ಇಲಾಖೆ ಅನುಮತಿ ಅಗತ್ಯವಿದೆ. ಹೀಗಾಗಿ ಬೇಡಿಕೆ ಪರಿಗಣಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ ಸಚಿವ ಶಿವಾನಂದ ಪಾಟೀಲ, ವಿಷಯದ ಕುರಿತು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡಿದರು.

Home add -Advt

ಅಂದಾಜು ರೂ.20 ಕೋಟಿಯಷ್ಟು ನೇಕಾರರ ವಿದ್ಯುತ್ ಬಾಕಿ ಮೊತ್ತವಿದೆ. ಇದನ್ನು ಮನ್ನಾ ಮಾಡುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಕೂಡಲೇ ಸಚಿವರು ಈ ಕುರಿತು ತೀರ್ಮಾನಕೈಗೊಳ್ಳಬೇಕು. ಅಲ್ಲಿಯವರೆಗೂ ವಿದ್ಯುತ್ ಸರಬರಾಜು ಕಂಪನಿಗಳು ನೇಕಾರ ಕೈಮಗ್ಗಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ನಿರ್ದೇಶನ ನೀಡಬೇಕು ಎಂದು ಶಾಸಕರಾದ ಶಶಿಕಲಾ ಜೊಲ್ಲೆ, ಸಿದ್ದು ಸವದಿ, ಬಿ.ವೈ.ವಿಜಯೇಂದ್ರ, ಪ್ರಭು ಚವ್ಹಾಣ್ ಕೋರಿದರು.

Related Articles

Back to top button