*ಶಕ್ತಿ, ಗೃಹಲಕ್ಷ್ಮೀ ಯೋಜನೆ ಎಫೆಕ್ಟ್: ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹೊಸ ದಾಖಲೆ*

ಮೂರು ತಿಂಗಳಲ್ಲಿ ೩.೮೧ ಕೋಟಿ ಕಾಣಿಕೆ
ಪ್ರಗತಿವಾಹಿನಿ ಸುದ್ದಿ, ಉಗರಗೋಳ : ಸಮಿಪದ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಯಲ್ಲಮ್ಮ ದೇವಸ್ಥಾನ ಹುಂಡಿಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಮೂರು ತಿಂಗಳ ಅವಧಿಯಲ್ಲಿ ರೂ ೩.೮೧ ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಇದರಲ್ಲಿ ರೂ ೩,೩೯,೪೦,೮೩೧ ನಗದು, ೩೨,೯೪,೫೦೦ ಮೌಲ್ಯದ ೩೪೦ ಗ್ರಾಂ ಚಿನ್ನಾಭರಣ, ರೂ ೯,೭೯,೫೦೦ ಮೌಲ್ಯದ ೮.೭೯೭ ಕೆ,ಜಿ ಬೆಳ್ಳಿ ಆಭರಣ ಸೇರಿವೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆಯಿಂದಾಗಿ ಕಾಣಿಕೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ.
ದೇಶದ ನಾನಾ ಭಾಗಗಳಿಂದ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸುವ ಭಕ್ತರು, ದೇವಸ್ಥಾನದ ಹುಂಡಿಯಲ್ಲಿ ಹಣ, ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ಹಾಕಿ ಭಕ್ತಿ ಸಮರ್ಪಿಸುತ್ತಾರೆ. ೨೦೨೫ರ ಎಪ್ರಿಲ್ ೧ ರಿಂದ ಜೂನ್ ೩೦ರ ಅವಧಿಯಲ್ಲಿ(೩ ತಿಂಗಳು)ಹೀಗೆ ಹಾಕಿದ್ದ ಕಾಣಿಕೆಗಳನ್ನು ಐದು ಸುತ್ತುಗಳಲ್ಲಿ ಎಣಿಕೆ ಮಾಡಲಾಯಿತು.
೨೦೨೩ ರಲ್ಲಿ ಇದೇ ಅವಧಿಯಲ್ಲಿ ರೂ ೧,೬೫,೧೭,೦೫೬ ಕಾಣಿಕೆ, ೨೦೨೪ರಲ್ಲಿ ಈ ಅವಧಿಯಲ್ಲಿ ರೂ. ೧,೯೬,೫೬,೦೩೫ ಕಾಣಿಕೆ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದ್ದು ಹೊಸ ದಾಖಲೆ ನಿರ್ಮಾಣವಾಗಿದೆ.
ದೇವಸ್ಥಾನದಲ್ಲಿ ವಿವಿಧ ಹೊಸ ಕ್ರಮಗಳನ್ನು ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಳವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಭಕ್ತರಿಗೆ ವಿವಿಧ ಮೂಲಸೌಕರ್ಯ ಒದಗಿಸಲಾಗುವುದು. ವಸತಿ, ಶುದ್ದ ಕುಡಿಯುವ ನೀರು, ಸುಲಭ ದರ್ಶನ, ಭಕ್ತರಿಗೆ ನೆರಳಿನ ವೈವಸ್ಥೆ ಅಲ್ಲದೆ, ಸ್ವಚ್ಚತೆಯ ಕಡೆಗೆ ಗಮನ ನೀಡಲಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಅಭಿವೃದ್ದಿ ಕಾರ್ಯಧರ್ಶಿ ಅಶೋಕ ದುಡಗುಂಟಿ ತಿಳಿಸಿದರು.
ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ರಾಜು ಕಗದಾಳ, ಪ್ರಕಾಶ ಪ್ರಭುನವರ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಸಿ ಎನ್ ಕುಲಕರ್ಣಿ, ಸದಾನಂದ ಶಿಂತ್ರಿ, ಆಯ್ ಸಿ ಕಗದಾಳ, ಕೆನರಾ ಬ್ಯಾಂಕ್ ಮ್ಯಾನೇಜರ ಚಾಣಾಕ್ಷ ನವಲಕರ, ಮಂಜು ಆಡಕರ, ರಾಮಣ್ಣಾ ಕೊದಾಂನಪೂರ, ಎಮ್ ಎಮ್ ಕಗದಾಳ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಎ ಎಸ್ ಐ, ಬಿ ಆರ್ ಸಣ್ಣಮಾಳಗೆ, ಶ್ರೀಧರ ಗಲಗಲಿ, ಗೋವಿಂದರಾವ್ ಕುಲಕರ್ಣಿ, ಮಲ್ಲಪ್ಪ ದರೂರ, ಮುತ್ತು ಅಮಾತೇನ್ನವರ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.