
ಪ್ರಗತಿವಾಹಿನಿ ಸುದ್ದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದ ನವದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರ್ತಿಕ್ ಹೂಗಾರ(34), ಐಶ್ವರ್ಯಾ(30) ಮೃತ ದುರ್ದೈವಿಗಳು. ಕಾರ್ತಿಕ್, ಐಶ್ವರ್ಯಾ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ದರ್ಶನಕ್ಕೆ ಹೋಗಿ ಒಳ್ಳೇದು ಮಾಡಪ್ಪ ಎಂದು ಬೇಡಿಕೊಂಡು ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಈ ದಂಪತಿ ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ ತೆರಳುತ್ತಿದ್ದು, ಈ ವೇಳೆ ಕಾರು ವೇಗವಾಗಿ ಹೋಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಇತ್ತ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.



