Politics

*ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಎನ್ನುವ ಘೋಷ ವಾಕ್ಯದೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದ ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಸರಣಿ ದರ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಸಂಸದರಾದ ಮಲ್ಲೇಶ್ ಬಾಬು ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಧಿಕಾರಕ್ಕೆ ಬಂದಾಗಿನಿಂದ ದರ ಏರಿಕೆ

ಸುರೇಶ್ ಬಾಬು, ಹೆಚ್.ಡಿ. ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಹಿರಿಯ ಶಾಸಕ ಎಂ.ಟಿ. ಕೃಷ್ಣಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಎ ತಿಪ್ಪೇಸ್ವಾಮಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Home add -Advt

ರಾಜ್ಯ ಐದು ಗ್ಯಾರಂಟಿ ಕೊಟ್ಟಿದೆ ನಿಜ. ಆದರೆ, ಗ್ಯಾರಂಟಿ ಪಡೆದ ಪಾಪಕ್ಕೆ ಜನರು ದಿನನಿತ್ಯ ಬೆಲೆ ಏರಿಕೆ ಬರೆಗೆ ತುತ್ತಾಗುತ್ತಿದ್ದಾರೆ. ದಿನಕ್ಕೊಂದು ದರ ಏರಿಕೆ ಮಾಡುತ್ತಿದ್ದಾರೆ. ಕೊಟ್ಟಿದ್ದು ಅಲ್ಪ, ಜನರ ಮೇಲೆ ಬೆಟ್ಟದಷ್ಟು ಹೇರಿಕೆ ಮಾಡಿದ್ದಾರೆ. ಇದನ್ನು ಸಹಿಸುವ ಅಗತ್ಯ ಇಲ್ಲ. ಜನರು ಸರ್ಕಾರದ ವಿರುದ್ಧ ದಂಗೆ ಏಳದೇ ಬೇರೆ ದಾರಿ ಇಲ್ಲ ಎಂದು ನಾಯಕರು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಎಲ್ಲೆಡೆ ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಎನ್ನುವ ಫಲಕಗಳು ರಾರಾಜಿಸಿದವು.

ವಿಧಾನಸೌಧ ಮುತ್ತಿಗೆ ಯತ್ನಿಸಿದ ನಾಯಕರ ಬಂಧನ, ಬಿಡುಗಡೆ

ಪ್ರತಿಭಟನಾ ಸಭೆ ಮುಕ್ತಾಯವಾದ ನಂತರ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾಯಕರು, ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಅಡ್ಡಗಟ್ಟಿದ ಪೊಲೀಸರು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

Related Articles

Back to top button