Belagavi NewsBelgaum NewsKannada NewsKarnataka NewsLatest

*ಯಡಿಯೂರಪ್ಪನವರಿಗಿರುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ : ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಭಿಮಾನಿಗಳೆಲ್ಲ ಸೇರಿ ಬಿಎಸ್ವೈ ಅಭಿಮಾನೋತ್ಸವ ಆಚರಿಸುತ್ತಿದ್ದೇವೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಗೌರವಾಧ್ಯಕ್ಷ, ಯಡಿಯೂರಪ್ಪ ಅಭಿಮಾನೋತ್ಸವದ ಅಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

ಬೆಳಗಾವಿಯ ಕನ್ನಡಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಇದೇ 9ರಂದು ನಡೆಯಲಿರುವ ಸಮಾವೇಶ ಜಾತ್ಯತೀತ, ಪಕ್ಷಾತೀತ. ಸುಮಾರು 10 ಲಕ್ಷ ಜನರ ನಿರೀಕ್ಷೆ ಇದೆ. 5 ಲಕ್ಷ ಆಸನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸೇರಿದಂತೆ ಬೆಳಗಾವಿ ಜಿಲ್ಲೆಗೆ ಬಹಳ ದೊಡ್ಡಮಟ್ಟದಲ್ಲಿ ಯಡಿಯೂರಪ್ಪ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ ಒಂದು ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಅವರು ರಾಜಕಾರಣಿಗಳಿಗೆಲ್ಲ ಆದರ್ಶರಾಗಿದ್ದಾರೆ ಎಂದು ಕೋರೆ ಹೇಳಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುವರ್ಣ ವಿಧಾನ ಸೌಧ ನಿರ್ಮಾಣ ಸೇರಿದಂತೆ ಬೆಳಗಾವಿಗೆ ಯಡಿಯೂರಪ್ಪ ಕೊಡುಗೆ ದೊಡ್ಡ ಮಟ್ಟದ್ದು. ಕಾಯಕ ಮತ್ತು ದಾಸೋಹ ತತ್ವಗಳ ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಹಾಗಾಗಿ ಸಾವಿರಾರು ಮಠಾಧೀಶರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರವಾಹ ಬಂದ ಸಂದರ್ಭದಲ್ಲಿ ನಿಯಮ ಮೀರಿ ದೊಡ್ಡ ಮಟ್ಟದ ನೆರವು ನೀಡಿದ್ದಾರೆ. ಜನಪರ ಕಾಳಜಿಯ ನಾಯಕರಾದ ಅವರು ರಾಜಕಾರಣ ಮತ್ತು ಸಮಾಜಕಾರ್ಯ ಎರಡನ್ನೂ ಆದರ್ಶವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದರು.

Home add -Advt

ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಮಾತನಾಡಿ, ಹೋರಾಟದ ಮೂಲಕ ನಾಯಕನಾಗಿ ಗುರುತಿಸಿಕೊಂಡವರು ಯಡಿಯೂರಪ್ಪ. ರಾಜಕಾರಣಿ ಹೇಗಿರಬೇಕು ಎಂದು ತೋರಿಸಿಕೊಟ್ಟವರು ಅವರು ಎಂದರು.

ಸಂಜಯ ಪಾಟೀಲ ಮಾತನಾಡಿ, ಎಲ್ಲ ಸಮಾಜಕ್ಕೂ ಯಡಿಯೂರಪ್ಪನವರ ಕೊಡುಗೆ ಇದೆ. ಬೆಳಗಾವಿಯ ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುವುದು ನಮಗೆಲ್ಲ ಹೆಮ್ಮೆ ಎಂದು ಹೇಳಿದರು.

ಮಂಗಲಾ ಅಂಗಡಿ, ಗೀತಾ ಸುತಾರ, ಸುಭಾಷ ಪಾಟೀಲ, ಅನಿಲ ಬೆನಕೆ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ, ಡಾ.ರವಿ ಪಾಟೀಲ, ಮುರುಘೇಂದ್ರ ಪಾಟೀಲ ಮೊದಲಾದವರಿದ್ದರು.

Related Articles

Back to top button