Karnataka NewsLatestPragativahini Special

*ಏಕಾಂಗಿಯಾಗಿ ಬದುಕುತ್ತಿದ್ದ ವೃದ್ಧನಿಗೆ ಪೊಲೀಸ್ ನೆರವು: 5 ವರ್ಷದ ನಂತರ ವೃದ್ಧಾಪ್ಯ ವೇತನ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ ಪುಂಡಲಿಕ್ ಜೊತೆಪ್ಪ ಲೋಹಾರ (80) ಎಂಬ ವೃದ್ಧನಿಗೆ ಯಮಕನಮರಡಿ ಪೊಲೀಸ್ ಠಾಣೆಯ ಪೊಲೀಸರ ಮಾನವೀಯ ಸ್ಪಂದನೆ ಜೀವನಾಧಾರವಾಗಿದೆ.

ಕುಟುಂಬದಿಂದ ದೂರವಾಗಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ಈ ವೃದ್ಧನಿಗೆ ಕಳೆದ ಐದು ವರ್ಷಗಳಿಂದ ವೃದ್ಧಾಪ್ಯ ವೇತನ ಸ್ಥಗಿತಗೊಂಡಿದ್ದು, ಜೀವನ ನಡೆಸುವುದು ಕಷ್ಟಕರವಾಗಿತ್ತು.


ಪುಂಡಲಿಕ್ ಪತ್ನಿ ದೂರವಾಗಿದ್ದು, ನಾಲ್ವರು ಮಕ್ಕಳಲ್ಲಿ ಮೂವರು ಹೆಣ್ಣು ಮಕ್ಕಳು ವಿವಾಹವಾಗಿ ಬೇರೆ ಊರುಗಳಲ್ಲಿ ವಾಸಿಸುತ್ತಿದ್ದಾರೆ. ಮಗನೂ ತಂದೆಯೊಂದಿಗೆ ಇರದೆ ಬೇರೆಡೆ ನೆಲೆಸಿದ್ದರಿಂದ, ವೃದ್ಧ ಸಂಪೂರ್ಣವಾಗಿ ಒಂಟಿಯಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.


ವೃದ್ಧಾಪ್ಯ ವೇತನಕ್ಕಾಗಿ ಅವರು ಹಲವು ಬಾರಿ ಪ್ರಯತ್ನಿಸಿದರೂ ಫಲ ಸಿಗದೆ ನಿರಾಶರಾಗಿದ್ದರು. ಈ ವಿಷಯ ಯಮಕನಮರಡಿ ಪೊಲೀಸ್ ಠಾಣೆಯ ಗಮನಕ್ಕೆ ಬಂದ ಕೂಡಲೇ, ಪೊಲೀಸರು ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಿದರು. ಠಾಣೆಯ ಇನ್ಸ್ಪೆಕ್ಟರ್ ಜಾವೇದ್ ಮುಶಾಪುರೆ ಅವರ ನೇತೃತ್ವದಲ್ಲಿ ತಕ್ಷಣವೇ ವಿಚಾರಣೆ ನಡೆಸಿ, ಸಂಬಂಧಿತ ತಹಸೀಲ್ದಾರರಿಗೆ ಪತ್ರ ಬರೆದು ವೃದ್ಧಾಪ್ಯ ವೇತನ ಪುನರಾರಂಭ ಮಾಡಲು ಮನವಿ ಮಾಡಿದರು.


ಪ್ರಾರಂಭದಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದ ವೇತನ ಮರುಪ್ರಾರಂಭ ವಿಳಂಬವಾಗಿದ್ದರೂ, ಹಿಂದೆ ಸರಿಯದ ಪೊಲೀಸರು ನಿರಂತರವಾಗಿ ಪತ್ರ ವ್ಯವಹಾರ ನಡೆಸಿ, ವಿಷಯವನ್ನು ಗಂಭೀರವಾಗಿ ಮುಂದಿಟ್ಟರು. ಕೊನೆಗೆ ಅವರ ಪ್ರಯತ್ನ ಫಲ ನೀಡಿದ್ದು, ಪುಂಡಲಿಕ್ ಲೋಹಾರ ಅವರಿಗೆ ಮತ್ತೆ ವೃದ್ಧಾಪ್ಯ ವೇತನ ಸಿಗುವಂತೆ ಮಾಡಲಾಗಿದೆ.


ಸಾಮಾನ್ಯವಾಗಿ ಪೊಲೀಸರು ಕೇವಲ ಕಾನೂನು-ಸುವ್ಯವಸ್ಥೆ ಕಾಪಾಡುವವರೇ ಎಂಬ ಭಾವನೆ ಇರುವ ಸಂದರ್ಭದಲ್ಲೇ, ಈ ರೀತಿಯ ಮಾನವೀಯ ಸೇವೆ ಸಮಾಜದಲ್ಲಿ ಒಳ್ಳೆಯ ಸಂದೇಶ ನೀಡಿದೆ. ಇನ್ಸ್ಪೆಕ್ಟರ್ ಜಾವೇದ್ ಮುಶಾಪುರೆ ಹಾಗೂ ಅವರ ತಂಡದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button