ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆಗಳಿಗೆ ಮಧ್ಯಂತರ (ದಸರಾ) ರಜೆಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಣೆ ಮಾಡುವಂತೆ ಎಲ್ಲೆಡೆಯಿಂದ ತೀವ್ರ ಒತ್ತಡ ಬರುತ್ತಿದೆ. ಆದರೆ ರಾಜ್ಯ ಸರಕಾರ ಇನ್ನೂ ಈ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ.
ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿ ದಸರಾ ರಜೆಯನ್ನು ವಿಸ್ತರಿಸುವ ಆದೇಶ ಹೊರಡಿಸಬಹುದೆನ್ನುವ ಸುದ್ದಿಯೂ ಇದೆ. ಸುದ್ದಿ ಮೂಲಗಳ ಪ್ರಕಾರ ಕಳೆದ ಶನಿವಾರವೇ ಮುಖ್ಯಮಂತ್ರಿಗಳು ಆದೇಶ ಹೊರಡಿಸಲು ಮುಂದಾಗಿದ್ದರು. ಆದರೆ ಶಿಕ್ಷಣ ಸಚಿವರೊಂದಿಗೆ ಮತ್ತೊಮ್ಮೆ ಚರ್ಚೆಯ ಬಳಿಕ ನಿರ್ಧಾರ ತೆಗೆದುಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಬಂದರೆಂದು ಗೊತ್ತಾಗಿದೆ.
ದಸರಾ ರಜೆಯನ್ನು ಒಂದು ತಿಂಗಳ ಕಾಲ ನೀಡುವ ಅವಶ್ಯಕತೆಯ ಕುರಿತು ವೈಜ್ಞಾನಿಕ ಕಾರಣಗಳನ್ನು ನೀಡಿ ಈ ಹಿಂದೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಪ್ರತಿಪಾದಿಸಿದ್ದರು. ನಂತರ ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ದಸರಾ ರಜೆಯನ್ನು ಅಕ್ಟೋಬರ್ 3ರಿಂದ ಅಕ್ಟೋಬರ್ 17 ರ ವರೆಗೆ ನಿಗದಿಪಡಿಸಲಾಗಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆಯನ್ನು ನೀಡಲಾಗಿದೆ. ಪ್ರತೀ ವರ್ಷಕ್ಕಿಂತ ಈ ಬಾರಿ ಹದಿನೈದು ದಿನ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಮಕ್ಕಳಿಗೆ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಟಾಗುತ್ತಿದೆ.
ಮಧ್ಯಂತರ ರಜೆ ಅವಧಿಯಲ್ಲಿ ಕಡಿತಗೊಳಿಸಲಾಗಿರುವುದರಿಂದ ರಾಜ್ಯದ ಮಕ್ಕಳಿಗೆ ನಿರಾಸೆ ಉಂಟಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಈ ಬಾರಿ ಅಕ್ಟೋಬರ್ 3 ರಿಂದ ಅಕ್ಟೋಬರ್ 31 ರ ವರೆಗೆ ವಿಸ್ತರಣೆ ಮಾಡುವಂತೆ ಶಿಕ್ಷಕರ ಸಂಘದ ಮನವಿಯಲ್ಲಿ ತಿಳಿಸಲಾಗಿದೆ.
ಮಧ್ಯಂತರ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ನೀಡಲು ಅದರದೇ ಆದ ವೈಜ್ಞಾನಿಕ ಕಾರಣಗಳಿವೆ. ಮಕ್ಕಳ ಶೈಕ್ಷಣಿಕ ಹಾಗೂ ಭೌತಿಕ ಹಿತದೃಷ್ಟಿಯಿಂದ ರಜಾ ದಿನಗಳನ್ನು ಹಾಗೂ ಒಟ್ಟು ನಿರ್ವಹಿಸಬೇಕಾದ ಶಾಲಾ ದಿನಗಳನ್ನು ಕೂಡ ವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತದೆ.
ಈ ಎಲ್ಲಾ ಅಂಶಗಳ ಜೊತೆಗೆ ಕೋವಿಡ್ ಕಾರಣಗಳಿಂದಾಗಿ ಈ ವರ್ಷ ಶಾಲೆಗಳಲ್ಲಿ ಮಕ್ಕಳ ಕಲಿಕಾ ಕಂದಕಗಳನ್ನು ಕಡಿಮೆಗೊಳಿಸುವ ಸಲುವಾಗಿ 15 ದಿನಗಳ ಮುಂಚಿತವಾಗಿ ಮೇ 15 ರಿಂದಲೇ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು. ಹೀಗಾಗಿ ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳಲು ದಸರಾ ರಜೆ ವಿಸ್ತರಣೆ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಲಿಕಾ ಚೇತರಿಕೆಯ ಹೆಸರಲ್ಲಿ ಈ ಬಾರಿ ಹದಿನೈದು ದಿನ ಮುಂಚಿತವಾಗಿ ಶಾಲಾರಂಭ ಮಾಡಿರುವುದು ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ. ಹಿಂದೆಲ್ಲಾ ಬೇಸಿಗೆ ರಜೆಯನ್ನು ಎರಡು ತಿಂಗಳು, ದಸರಾ ರಜೆಯನ್ನು ಸರಾಸರಿ ಒಂದು ತಿಂಗಳ ಕಾಲ ನೀಡಲಾಗುತ್ತಿತ್ತು.
ಆದ್ರೆ ವರ್ಷಗಳು ಕಳೆದಂತೆ ರಜೆಯ ಅವಧಿಯನ್ನು ಕಡಿತ ಮಾಡಲಾಗುತ್ತಿದೆ. ಈ ಬಾರಿ ಬೇಸಿಗೆ ರಜೆಯಲ್ಲಿ ಹದಿನೈದು ದಿನ ಕಡಿತ ಮಾಡಲಾಗಿದ್ದು, ಇದೀಗ ದಸರಾ ರಜೆಯಲ್ಲಿ ಕಡಿತ ಮಾಡಿರೋದು ಮಕ್ಕಳನ್ನು ಹಾಗೂ ಶಿಕ್ಷಕರನ್ನು ಒತ್ತಡಕ್ಕೆ ಸಿಲುಕಿಸಿದಂತಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆಯೂ ಗಂಭೀರವಾದ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸರಕಾರ, ಶಿಕ್ಷಣ ಇಲಾಖೆ ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪುಟ್ಟಣ್ಣ ಪತ್ರದಲ್ಲೇನಿದೆ?
ದಸರಾ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿದ್ದು, ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ಒಂದು ತಿಂಗಳವರೆಗೆ ವಿಸ್ತರಿಸಿ ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವರಿಗೆ ಅವರು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಇವರು ಸಲ್ಲಿಸಿರುವ ವಿನಂತಿ ಅರ್ಜಿ ಯನ್ನು ಅವರು ಉಲ್ಲೇಖಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಉತ್ತರದಿಂದ ಶಾಲಾ ಮಧ್ಯಂತರ ರಜೆಯನ್ನು ಅಕ್ಟೋಬರ್-3ರಿಂದ ಅಕ್ಟೋಬರ್ 31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ, ಆಚರಣೆಗಳನ್ನು ಮಕ್ಕಳು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಪ್ರೇರಣೆ ನೀಡಲಾಗುತ್ತಿದ್ದು, ಇದನ್ನು ದಸರಾ ರಜೆ ಎಂತಲೂ ಕರೆಯಲಾಗುತ್ತಿತ್ತು.
ಹಬ್ಬದ ರಜೆಯಲ್ಲಿ ಮಕ್ಕಳು, ಅಜ್ಜ ಅಜ್ಜಿ ಮನೆಗೆ ತೆರಳುವುದು ವಾಡಿಕೆ. ಆದರೆ ಇತ್ತೀಚೆಗೆ ದಸರಾ ರಜೆಯನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ. ನಾಡಹಬ್ಬದ ಹಾಗೂ ನಾಡಿನ ಆಚರಣೆಗಳ ಕುರಿತು ಪಠ್ಯಕ್ರಮದಲ್ಲಿ ಇರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಹೀಗಿರುವಂತೆ ಶಾಲೆ ನಡೆಯುವ ದಿನಗಳ ಸಂಖ್ಯೆ ಎರಡು ನೂರ ಅರವತ್ತಕ್ಕೂ ಹೆಚ್ಚು ಇರುತ್ತವೆ. ಈ ಹಿಂದೆ ಶಾಲೆ ನಡೆಯುವ ದಿನಗಳು ಎರಡು ನೂರ ಇಪ್ಪತ್ತರಿಂದ ಮೂವತ್ತು ಇರುತ್ತಿದ್ದವು.
ಮುಂದುವರೆದು ನಮ್ಮ ರಾಜ್ಯ ಶಿಕ್ಷಣ ಇಲಾಖೆ ರಜಾ ಸಹಿತ ಇಲಾಖೆಯಾಗಿದ್ದು, ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ರಜಾರಹಿತ ಇಲಾಖೆಯವರಿಗೆ ಮೂವತ್ತು ಗಳಿಕೆ ರಜೆ ನೀಡಲಾಗುತ್ತದೆ.
ಈ ದಿಸೆಯಲ್ಲಿ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿದ್ದು, ತಾವುಗಳು ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ಒಂದು ತಿಂಗಳವರೆಗೆ ವಿಸ್ತರಿಸಿ ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ಪುಟ್ಟಣ್ಣ ಬರೆದಿದ್ದಾರೆ.
ಶಾಲೆಗಳ ದಸರಾ ರಜೆಯನ್ನು ವಿಸ್ತರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾಗಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕೂಡ ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಗಾಗಿ ಸರಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.
https://pragati.taskdun.com/latest/cm-signs-extension-of-dussehra-holiday-for-schools-on-saturday/
https://pragati.taskdun.com/karnataka-news/education-karnataka-news/cm-signs-extension-of-dussehra-holiday-for-schools-on-saturday/
https://pragati.taskdun.com/latest/will-dussehra-vacation-of-schools-be-extended-to-one-month/
https://pragati.taskdun.com/latest/dussehra-holiday-of-schools-dc-ceos-have-authority-to-change/
https://pragati.taskdun.com/karnataka-news/education-karnataka-news/how-long-is-the-dussehra-holiday-belagavi-zp-ceo-information/
https://pragati.taskdun.com/karnataka-news/dussehra-vation-for-teachers/
https://pragati.taskdun.com/latest/dussehra-vacation-for-teachers/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ