ಅನಂತಕುಮಾರ ಹೆಗಡೆಗೆ ಖಾನಾಪುರದಲ್ಲಿ ಹಿಗ್ಗಾಮುಗ್ಗಾ ತರಾಟೆ
ಚುನಾವಣೆ ಸಮೀಪಿಸುತ್ತಿದ್ದಂತೆ ನಿಮಗೆ ಖಾನಾಪುರ-ಕಿತ್ತೂರು ಜನರ ನೆನಪಾಯ್ತೆ…?
ನಾಲ್ಕು ವರ್ಷಗಳ ಬಳಿಕ ಖಾನಾಪುರದಲ್ಲಿ ಪ್ರತ್ಯಕ್ಷರಾದ ಸಂಸದರಿಗೆ ಸ್ವಪಕ್ಷದ ಕಾರ್ಯಕರ್ತರಿಂದ ಪ್ರಶ್ನೆಗಳ ಸುರಿಮಳೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಬುಧವಾರ ಪಟ್ಟಣಕ್ಕೆ ಭೇಟಿ ನೀಡಿದ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರನ್ನು ಅವರದ್ದೇ ಪಕ್ಷದ ಕಾರ್ಯಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ವಕೀಲ ಚೇತನ ಮನೇರಿಕರ, ನೀಲಾವಡೆ ಗ್ರಾಪಂ ಸದಸ್ಯ ವಿನಾಯಕ ಮುತಗೇಕರ, ಪಕ್ಷದ ಹಿರಿಯ ಮುಖಂಡ ಜಯಂತ ತಿಣೈಕರ ಸೇರಿದಂತೆ ಹಲವು ಕಾರ್ಯಕರ್ತರು ಸಂಸದರನ್ನುದ್ದೇಶಿಸಿ ಮಾತನಾಡಿ, “ತಾವು ಐದು ಬಾರಿ ಸಂಸದರು ಮತ್ತು ಒಮ್ಮೆ ಕೇಂದ್ರ ಸಚಿವರಾಗಿದ್ದೀರಿ, ಲೋಕಸಭೆ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ಮತದಾರರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಅಷ್ಟಾದರೂ ತಾವು ತಾಲೂಕಿಗೆ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಮಾಡಿಲ್ಲ. ವರ್ಷಗಟ್ಟಲೇ ಕ್ಷೇತ್ರದ ಜನತೆಗೆ ಮುಖ ತೋರಿಸಿಲ್ಲ. ಈ ಕಾರಣದಿಂದಲೇ ಜನರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ. ಅದಕ್ಕಾಗಿ ನಿಮ್ಮ ಹೃದಯ ವೈಶಾಲ್ಯತೆ ತೋರಿ ಮುಂಬರುವ ಲೋಕಸಭೆ ಚುನಾವಣೆಗೆ ಖಾನಾಪುರ ತಾಲೂಕಿನ ಭಾರತೀಯ ಜನತಾ ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರಿಗೆ ಪಕ್ಷದ ಟಿಕೆಟ್ ಕೊಡಿಸುವ ಮೂಲಕ ಬೇರೆಯವರು ಕೆನರಾ ಸಂಸದರಾಗಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ಕಳೆದ ೫ ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಅಧಿಕ ಮತಗಳ ಲೀಡ್ ನೀಡಿ ನಿಮ್ಮನ್ನು ಗೆಲ್ಲಿಸಿದ ಖಾನಾಪುರ-ಕಿತ್ತೂರು ಮತದಾರರಿಗೆ ನಿಮ್ಮ ಕೊಡುಗೆ ಏನು ?, ಈ ಭಾಗದ ಸಂದಸರಾಗಿ, ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿದ ನೀವು ನಮಗಾಗಿ ಮಾಡಿರುವ ಕೆಲಸವಾದರೂ ಏನು ?, ೨೦೨೦-೨೧ರ ಕೋವಿಡ್, ೨೦೧೯ರ ಅತೀವೃಷ್ಟಿ, ಕಳೆದ ವರ್ಷದ ಅನಾವೃಷ್ಟಿ ಸಂದರ್ಭದಲ್ಲಿ ಎಲ್ಲಿದ್ರಿ. ? ೮ ವರ್ಷಗಳಿಂದ ಕುಂಟುತ್ತ-ತೆವಳುತ್ತ ಸಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸ್ಥಳೀಯ ಜನತೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನಿಮಗೆ ಅರಿವಿದೆಯೇ ?, ಚುನಾವಣೆ ಸಮೀಪಿಸುತ್ತಿದ್ದಂತೆ ನಿಮಗೆ ಖಾನಾಪುರ-ಕಿತ್ತೂರು ಜನರ ನೆನಪಾಯ್ತೆ…? ಇದೀಗ ಲೋಕಸಭೆ ಚುನಾವಣೆಯ ಗಾಳಿ ಬೀಸಲಾರಂಭಿಸಿದ್ದು, ಮತ್ತೊಮ್ಮೆ ಅಧಿಕಾರ ಪಡೆಯುವ ಉದ್ದೇಶದಿಂದ ತಾವು ಇತ್ತೀಚೆಗೆ ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾರಂಭಿಸಿದ್ದೀರಿ. ಅನಾರೋಗ್ಯದ ನೆಪವೊಡ್ಡಿ ವರ್ಷಗಟ್ಟಲೇ ಮುಖ್ಯವಾಹಿನಿಯಿಂದ ದೂರವುಳಿದಿದ್ದ ತಾವು ಈಗ ಒಮ್ಮೆಲೇ ಇಡೀ ಕ್ಷೇತ್ರದ ಪ್ರವಾಸವನ್ನೂ ಆರಂಭಿಸಿದ್ದೀರಿ. ನಿಮ್ಮ ಕಾರ್ಯವೈಖರಿ ಬಗ್ಗೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಖಾನಾಪುರ-ರಾಮನಗರ ರಸ್ತೆ ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ನೀವೇಕೆ ಧ್ವನಿ ಎತ್ತಲಿಲ್ಲ. ಮಹದಾಯಿ ಯೋಜನೆ ಆರಂಭಿಸಲು ನೀವೇಕೆ ಪ್ರಯತ್ನ ಪಡುತ್ತಿಲ್ಲ. ಖಾನಾಪುರದಲ್ಲಿ ಪ್ರವಾಹ ಬಂದಾಗ ಕೊರೊನಾ ಸಂದರ್ಭದಲ್ಲಿ, ಕಳೆದ ವರ್ಷದ ವಿಧಾನಸಭಾ ಚುನಾವಣೆಯ ವೇಳೆ ನೀವು ಯಾಕೆ ಇತ್ತ ಸುಳಿಯಲಿಲ್ಲ, ಕ್ಷೇತ್ರದಲ್ಲಿ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯ ಏಕೆ ಆಗಲಿಲ್ಲ. ಕ್ಷೇತ್ರದ ಹಿಂದಿನ ಕಾಂಗ್ರೆಸ್ ಶಾಸಕರು ನಿಮ್ಮ ಅನುಪಸ್ಥಿತಿಯ ಬಗ್ಗೆ ಬಹಿರಂಗ ಭಾಷಣಗಳನ್ನು ಮಾಡಿದಾಗ ನೀವೇಕೆ ಪ್ರತ್ಯುತ್ತರ ನೀಡಲಿಲ್ಲ” ಎಂದು ಗ್ರಾಪಂ.ಸದಸ್ಯ ವಿನಾಯಕ ಮುತಗೇಕರ ಸಂಸದರನ್ನು ಪ್ರಶ್ನಿಸಿದರು.
ಬುಧವಾರ ಮಧ್ಯಾಹ್ನ ಸಂಸದ ಹೆಗಡೆ ಅವರ ಕ್ಷೇತ್ರ ಪ್ರವಾಸದ ಸುದ್ದಿ ತಿಳಿದು ಅವರನ್ನು ಭೇಟಿಯಾಗಲು ಬಂದಿದ್ದ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತುಂಬಿದ ಸಭೆಯಲ್ಲಿಯೇ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಮೊದಮೊದಲು ಕಾರ್ಯಕರ್ತರ ಪ್ರಶ್ನೆಗಳಿಗೆ ಅನಂತಕುಮಾರ ಹೆಗಡೆ ಸಮಾಧಾನವಾಗಿ ಉತ್ತರಿಸಿದರು. ಬಳಿಕ ಕೆಲ ಕಾರ್ಯಕರ್ತರು ಆಕ್ರೋಶದಿಂದ ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ನಿರುತ್ತರರಾದರು. ಕೆಲ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ಮೌನಕ್ಕೆ ಆದ್ಯತೆ ನೀಡಿದರು. ಕ್ಷೇತ್ರದ ಅಭಿವೃದ್ಧಿಯ ವಿಷಯವಾಗಿ ಕಾರ್ಯಕರ್ತರು ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಲು ಸಾಧ್ಯವಾಗದೇ ಆ ಪ್ರಶ್ನೆಗಳಿಗೆ ಹಿಂದುತ್ವ ವಾದ ಮತ್ತು ಧಾರ್ಮಿಕತೆಯ ಬಣ್ಣ ಬಳಿಯಲು ಪ್ರಯತ್ನಿಸಿದರು.
ಕಾರ್ಯಕರ್ತರಿಂದ ಕೇಳಿಬಂದ ಆಕ್ರೋಶಭರಿತ ಪ್ರಶ್ನೆಗಳಿಗೆ ಉತ್ತರ ನೀಡಲು ಸಂಸದ ಹೆಗಡೆ ಅವರಿಗೆ ಸಾಧ್ಯವಾಗಲಿಲ್ಲ. ಈ ವಿಷಯವಾಗಿ ಕೆಲಕಾಲ ಸಭೆಯಲ್ಲಿ ತೀವ್ರ ಮಾತಿನ ಚಕಮಕಿಗಳು ನಡೆದವು. ಕೊನೆಯಲ್ಲಿ ಅವರು ಧಾರ್ಮಿಕ ವಿಷಯವನ್ನು ಮುಂದಿಟ್ಟುಕೊಂಡು ಭಾಷಣ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಹೊಗಳಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಧನಶ್ರೀ ದೇಸಾಯಿ, ಬಾಬುರಾವ್ ದೇಸಾಯಿ, ಗುಂಡು ತೋಪಿನಕಟ್ಟಿ, ಸುರೇಶ ದೇಸಾಯಿ, ಸದಾನಂದ ಪಾಟೀಲ, ಪಂಡಿತ ಓಗಲೆ, ಕಿರಣ ಯಳ್ಳೂಕರ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ