CrimeKannada NewsKarnataka NewsLatest

*ಸಿಮೆಂಟ್ ಲಾರಿ ಹರಿದು 80ಕ್ಕೂ ಅಧಿಕ ಕುರಿಗಳ ಸಾವು*

ಪ್ರಗತಿವಾಹಿನಿ ಸುದ್ದಿ: ಕುರಿ ಮೇಯಿಸಲು ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿಮೆಂಟ್ ತುಂಬಿದ ಲಾರಿಯೊಂದು ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ತಾಲೂಕಿನ ಕಾರೆಕಲ್ ಗ್ರಾಮದ ಸಮೀಪ ನಡೆದಿದೆ.

ಸಿಂದವಾಳ ಗ್ರಾಮದ ವೀರಭದ್ರಪ್ಪ ಎಂಬುವವರಿಗೆ ಸೇರಿದ ಕುರಿಗಳು ಅಪಘಾತದಲ್ಲಿ ಸಾವನ್ನಪ್ಪಿವೆ. ಎಂದಿನಂತೆ ಕುರಿಗಳನ್ನು ಮೇಯಿಸಲು ರಸ್ತೆ ಬದಿಯಲ್ಲಿ ಕರೆದೊಯ್ಯುತ್ತಿದ್ದ ವೇಳೆ, ತೆಲಂಗಾಣದಿಂದ ಬಳ್ಳಾರಿ ಕಡೆಗೆ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಏಕಾಏಕಿ ಕುರಿಗಳ ಹಿಂಡಿನ ಮೇಲೆ ನುಗ್ಗಿದೆ ಎನ್ನಲಾಗಿದೆ.

ಲಾರಿಯ ಅಡಿಗೆ ಸಿಲುಕಿದ 80ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ರಸ್ತೆಯುದ್ದಕ್ಕೂ ಕುರಿಗಳ ಮೃತದೇಹಗಳು ಬಿದ್ದಿದ್ದವು. ಕುರಿ ಸಾಕಾಣಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದ ವೀರಭದ್ರಪ್ಪ ಅವರಿಗೆ ಈ ದುರಂತದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಒಂದೇ ಅಪಘಾತದಲ್ಲಿ ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಯಿ ಕುಟುಂಬ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.

ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button