ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟ ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ದೈಹಿಕ ಶಿಕ್ಷಣ ಬೋಧಕರು ಕಪ್ಪು ಪಟ್ಟಿ ಧರಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾತ್ವಿಕ ಪ್ರತಿಭಟನೆ ಕೈಗೊಂಡಿದ್ದಾರೆ.
ಸರ್ಕಾರ ರಾಜ್ಯಾದ್ಯಂತ ದೈಹಿಕ ಶಿಕ್ಷಣ ಬೋಧಕರ ಪ್ರಮುಖ ಬೇಡಿಕೆಯಾಗಿರುವ ನ್ಯಾ.ವೈದ್ಯನಾಥನ್ ವರದಿಯ ಶಿಫಾರಸ್ಸು ಜಾರಿಗೊಳಿಸದೇ ಅನ್ಯಾಯವೆಸಗಿದೆ. ಸರ್ಕಾರದ ಗಮನವನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಕಪ್ಪುಪಟ್ಟಿ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು ತಮ್ಮ ಪ್ರತಿಭಟನೆಯ ಮೂಲಕ ನ್ಯಾ.ವೈದ್ಯನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ ಎಂದು ದೈಹಿಕ ಶಿಕ್ಷಣ ಬೋಧಕರ ಸಂಘ ತಿಳಿಸಿದೆ.
ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲಾಖೆ ನಡೆಸುತ್ತಿರುವ ಕ್ರೀಡಾಕೂಟ ಬಹಿಷ್ಕರಿಸಿ ಪ್ರತಿಭಟಿಸಬಹುದಾಗಿತ್ತು. ಆದರೆ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೆ ಮಾಡದೇ ಕಪ್ಪು ಪಟ್ಟಿ ಧರಿಸಿ ಸರ್ಕಾರದ ಗಮನ ಸೆಳೆಯುವ ಮೂಲಕ ಕ್ರೀಡಾಕೂಟ ನಡೆಸಿದ್ದೇವೆ ಎಂದು ದೈಹಿಕ ಶಿಕ್ಷಣ ಅಧಿಕಾರಿ ಎಲ್.ಎನ್ ಕುರೇರ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ