ಜನರಲ್ಲಿ ನಮ್ಮ ಸರಕಾರ ಎನ್ನುವ ಭಾವನೆ ಮೂಡಿದೆ; ರಾಜ್ಯದ ಪ್ರತಿ ಮನೆಯನ್ನೂ ತಲುಪಿದೆ ಕಾಂಗ್ರೆಸ್ ಗ್ಯಾರಂಟಿ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಯನ್ನೂ ತಲುಪಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನೆ ಗ್ರಾಮಸ್ಥರು ಶನಿವಾರ ಸಂಜೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಚುನಾವಣೆ ಪೂರ್ವ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಒಂದಿಲ್ಲೊಂದು ಯೋಜನೆಗಳು ಎಲ್ಲರ ಮನೆಗಳನ್ನೂ ತಲುಪಿವೆ. ವಿದ್ಯುತ್ ಬಿಲ್ ತುಂಬುವುದು ತಪ್ಪಿದೆ, ಮಹಿಳೆಯರು ಬಸ್ ಟಿಕೆಟ್ ಪಡೆಯುವುದು ನಿಂತಿದೆ. ಗೃಹ ಲಕ್ಷ್ಮೀ ಮೂಲಕ 2 ಸಾವಿರ ರೂ. ಬರುತ್ತಿದೆ. ಪಡಿತರ ಮತ್ತು ಅದರ ಹಣ ಖಾತೆಗೆ ಜಮಾ ಆಗುತ್ತಿದೆ. ಈಗ ಯುವ ನಿಧಿ ಯೋಜನೆಯೂ ಜಾರಿಗೊಂಡಿದೆ. ಇದರಿಂದಾಗಿ ಜನರ ಆರ್ಥಿಕತೆ ಉತ್ತಮವಾಗಿದೆ. ಪ್ರಸ್ತುತ ಬರಗಾಲವನ್ನು ಎದುರಿಸುವ ಶಕ್ತಿ ಜನರಿಗೆ ಬಂದಿದೆ. ಜನರಲ್ಲಿ ನಮ್ಮ ಸರಕಾರ ಎನ್ನುವ ಭಾವನೆ ಮೂಡಿದೆ ಎಂದು ಹೆಬ್ಬಾಳಕರ್ ತಿಳಿಸಿದರು.
ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ನನ್ನನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಕೃಪೆಯಿಂದ ನಾನು ರಾಜ್ಯದ ಮಂತ್ರಿಯಾಗಿದ್ದೇನೆ. ನಿಮ್ಮ ಮನೆ ಮಗಳು ರಾಜ್ಯದ ಸೇವೆ ಮಾಡುವ ಮೂಲಕ ನಿಮ್ಮ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ. ನಿಮ್ಮ ಬೆಂಬಲ ನನಗೆ ಸದಾ ಇರಲಿ ಎಂದು ಹೆಬ್ಬಾಳಕರ್ ಕೋರಿದರು.
ಈ ಸಮಯದಲ್ಲಿ ಯುವರಾಜ ಕದಂ, ಅರುಣ ದೇವನ್, ದೀಪಕ್ ಪಾಟೀಲ, ವಿಮಲಾ ತಾಯಿ ಸಾಖರೆ, ಪಿಂಟು ಕಾಗಣಕರ್, ವಿನಾಯಕ ಪಾಟೀಲ, ಶಂಕರ ಪಾಟೀಲ, ವೈಜನಾಥ್ ರಾಜಗೋಳ್ಕರ್, ಶುಭಾಂಗಿ ರಾಜಗೋಳ್ಕರ್, ಲತಾ ಶಿವನೆಗೆಕರ್, ರಘುನಾಥ್ ಖಂಡೇಕರ್, ಮರಗಾಯಿ ಯುವಕ ಮಂಡಳ, ಸುರೇಶ ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ